ಹೊಸಪೇಟೆ ನಗರಸಭೆ ಅಧಿಕಾರಿಗಳು ಸದಸ್ಯರ ಫೋನ್‌ ಕರೆ ಸ್ವೀಕರಿಸಲ್ಲ

| Published : Jul 13 2024, 01:33 AM IST

ಸಾರಾಂಶ

ವಾರ್ಡ್‌ಗಳಿಗೆ ಬೆಳಗ್ಗೆ 6 ಗಂಟೇಗೆ ಹೋಗುತ್ತೇವೆ. ಸ್ಥಳೀಯರು ನಮ್ಮ ಬಳಿ ಸಮಸ್ಯೆ ಹೇಳಿಕೊಳ್ಳುತ್ತಾರೆ.

ಹೊಸಪೇಟೆ: ನಗರಸಭೆ ಸದಸ್ಯರಿಗೆ ಅಧಿಕಾರಿಗಳು ಕಿಂಚಿತ್ತೂ ಬೆಲೆ ಕೊಡುವುದಿಲ್ಲ. ವಾರ್ಡ್ ಗಳಲ್ಲಿ ಸ್ವಚ್ಛತೆಗಾಗಿ ಫೋನ್‌ ಮಾಡಿದರೂ ಕರೆ ಸ್ವೀಕರಿಸಲ್ಲ. ಅಧಿಕಾರಿಗಳಿಂದಾಗಿ ವಾರ್ಡ್‌ಗಳಲ್ಲಿ ಕೆಲಸ ಆಗದೇ ಜನರು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಡೆಂಘೀ ಜ್ವರದ ಹಾವಳಿಯೂ ಇದೆ. ಇಂತಹದರಲ್ಲಿ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಹೇಗೆ? ಎಂದು ನಗರಸಭೆ ಉಪಾಧ್ಯಕ್ಷ ಶೇಕ್ಷಾವಲಿ, ಸದಸ್ಯರಾದ ಗುಜ್ಜಲ ರಾಘವೇಂದ್ರ, ಹುಲಗಪ್ಪ ಖಾರವಾಗಿಯೇ ಪ್ರಶ್ನಿಸಿದರು.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪರಿಸರ ಎಂಜಿನಿಯರ್ ಆರತಿ ಸದಸ್ಯರಿಗೆ ಗೌರವ ಕೊಡುವುದಿಲ್ಲ. ನಗರದಲ್ಲಿ ಸ್ವಚ್ಛತೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಾರ್ಡ್‌ಗಳಿಗೆ ಬೆಳಗ್ಗೆ 6 ಗಂಟೇಗೆ ಹೋಗುತ್ತೇವೆ. ಸ್ಥಳೀಯರು ನಮ್ಮ ಬಳಿ ಸಮಸ್ಯೆ ಹೇಳಿಕೊಳ್ಳುತ್ತಾರೆ. ವಾರ್ಡ್ ನ ಸ್ವಚ್ಛತಾ ಸಿಬ್ಬಂದಿ, ಸೂಪರ್‌ ವೈಸರ್‌ಗಳಿಗೆ ಕೇಳಿದರೆ ನಮಗೆ ಕೇಳಬೇಡಿ ಎಂಜಿನಿಯರ್ ಆರತಿಗೆ ಕೇಳಿ ಎನ್ನುತ್ತಾರೆ. ಆದರೆ, ಎಂಜಿನಿಯರ್‌ಗೆ ನೂರು ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸಲ್ಲ. ಇವರಿಂದ ಸ್ವಚ್ಛತೆ ನಿರ್ವಹಣೆ ಮಾಡಲು ಆಗುತ್ತಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯೆಸಿದ ಪ್ರಭಾರ ಪೌರಾಯುಕ್ತ ಮನೋಹರ್, ಜನಪ್ರತಿನಿಧಿಗಳು ಜನರ ಸೇವೆಗಾಗಿ ಬಂದವರು. ಇಲ್ಲಿ ನಮ್ಮ ಸಮನ್ವಯ ಕೊರತೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗಬಾರದು. ನಿಯಮಾನುಸಾರ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸರ್ಕಾರಿ ಜಮೀನು ಉಳಿಸಿ: ನಗರಸಭೆಯಲ್ಲಿ ಹಲವು ಸರ್ಕಾರಿ ಜಮೀನುಗಳಿವೆ. ಅವುಗಳ ಒತ್ತುವರಿಯಾಗುತ್ತಿವೆ. ನಗರಸಭೆ ಅಧಿಕಾರಿಗಳು ಕೂಡಲೇ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ತಂತಿ ಬೇಲಿ ಹಾಕಿ ಕೊಡಬೇಕು. ಕಳೆದ ಒಂದು ವರ್ಷದ ಹಿಂದೆ ಸಭೆಯಲ್ಲಿ ತರಲಾಗಿತ್ತು. ಅನುಮತಿ ದೊರೆಯಿತು. ಆದರೆ ಇವರಿಗೆ ನಗರಸಭೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯೆ ಲತಾ ಸಂತೋಷ್ ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಅಬ್ದುಲ್ ಖದಿರ್, ನಗರಸಭೆ ವ್ಯಾಪ್ತಿಯ ಹಲವು ಸರ್ಕಾರಿ ಜಮೀನುಗಳನ್ನು ಕೆಲವರು ₹2 ಲಕ್ಷ ಪ್ರಭಾವಿಗಳಿಗೆ ನೀಡಿ ಗುಡಿಸಲು ಹಾಕುತ್ತಿದ್ದಾರೆ‌. ನಂತರ ಬಹಳ ವರ್ಷಗಳ ವಾಸವಿದ್ದೇವೆ ಎಂದು ಡೋರ್ ನಂಬರ್ ಮಾಡಿಸುತ್ತಾರೆ. ಇವೆಲ್ಲ ಅಧಿಕಾರಿಗಳ ಸಹಕಾರಗಳಿಂದ ನಡೆಯುತ್ತಿದೆ ಇದನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು ಇದಕ್ಕೆ ಕಡಿವಾಣ ಹಾಕಲಾಗುವುದು ಎಂದರು.

ಆಸ್ತಿ ತೆರಿಗೆ ಪಾವತಿ ಮಾಡದ ಖಾಸಗಿ ಅನುದಾನಿತ ಶಾಲೆ, ಚಿತ್ರಮಂದಿರ, ಸ್ಟಾರ್ ಹೋಟೆಲ್, ಲಾಡ್ಜ್, ಕಲ್ಯಾಣ ಮಂಟಪಗಳು, ಅಪಾರ್ಟಮೆಂಟ್ ಸೇರಿದಂತೆ ವಾಣಿಜ್ಯ ಕಟ್ಟಡಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸದಸ್ಯೆ ರೋಹಿಣಿ ವೆಂಕಟೇಶ್‌ ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ಎ.ಲತಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ, ಸದಸ್ಯರಾದ ಕಿರಣ, ತಾರಿಹಳ್ಳಿ ಜಂಬುನಾಥ, ಜೀವರತ್ನಂ, ಕೆ. ಮಹೇಶ್‌ಕುಮಾರ, ಹನುಮಂತಪ್ಪ, ರೂಪೇಶ್‌ಕುಮಾರ ಮತ್ತಿತರರಿದ್ದರು.