ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಆಸ್ಪತ್ರೆಗೆ ಬರುವ ರೋಗಿಗಳಿಗೆ ತ್ವರಿತಗತಿಯಲ್ಲಿ ಸೇವೆ ನೀಡಲು ಅಗತ್ಯ ಸೌಲಭ್ಯ ಕಲ್ಪಿಸುತ್ತೇನೆ. ವೈದ್ಯರು ರೋಗಿಗಳಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು ಎಂದು ಶಾಸಕ ಕೆ.ಎಂ.ಉದಯ್ ಸೂಚಿಸಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸ್ಪತ್ರೆ ಬಹಳ ಪ್ರಗತಿ ಸಾಧಿಸುತ್ತಿದೆ. ಗರ್ಭಿಣಿಯರಿಗೆ ಹೆರಿಗೆ ವಿಚಾರದಲ್ಲಿ ವೈದ್ಯರು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷ 200ಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿಸಿರುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಅರ್ಜುನ್ ಕುಮಾರ್‌ರವರ ಸೇವೆಗೆ ಪ್ರಶಂಸಿಸಿ, ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ ಎನ್ನುವ ಭರವಸೆಯನ್ನು ವೈದ್ಯರು ನೀಡುತ್ತಿದ್ದಾರೆ. ಆಸ್ಪತ್ರೆಯು ಸಾಕಷ್ಟು ಸುಧಾರಣೆ ಕಂಡಿದೆ ಎಂದರು.ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೊದಲ ಬಾರಿಗೆ ಹೆರಿಗೆ ಮಾಡಿಸಲು ಶಸ್ತ್ರ ಚಿಕಿತ್ಸಾ ಸೌಲಭ್ಯ ಕಲ್ಪಿಸಿದ್ದರ ಪ್ರತಿಫಲದಿಂದ ಈಗಾಗಲೇ 50ಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಈ ಸೌಲಭ್ಯದಿಂದ ಸ್ಥಳೀಯರು ಮಂಡ್ಯಕ್ಕೆ ಅಲೆಯುವುದು ತಪ್ಪಿದಂತಾಗಿದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಬಡ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ದೊರೆಯುವಂತೆ ಮಾಡಲು ಶಕ್ತಿ ಮೀರಿ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಆಸ್ಪತ್ರೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ವೈದ್ಯಾಧಿಕಾರಿಗಳು ಎಚ್ಚರ ವಹಿಸಬೇಕು. ಆಸ್ಪತ್ರೆಯಲ್ಲಿ ಸೌಲಭ್ಯದ ಕೊರತೆ ಕಂಡು ಬಂದ ಕೂಡಲೇ ತನ್ನ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು.
ಮುಂದಿನ ದಿನಗಳಲ್ಲಿ ಬೇಸಿಗೆಗಾಲ ಆರಂಭವಾಗುವುದರಿಂದ ಸಾರ್ವಜನಿಕರು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ರೋಗಗಳು ಬಾರದಂತೆ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಆಸ್ಪತ್ರೆ ವತಿಯಿಂದ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಾಗಿ ಆಸ್ಪತ್ರೆಗೆ ಬರುವ ಹಿನ್ನೆಲೆಯಲ್ಲಿ ಅವರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಆಸ್ಪತ್ರೆಯ ಆವರಣದಲ್ಲಿ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಹೊರಗಿನವರು ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಅವರಿಗೆ ಸೂಚಿಸಿದರು.ಆಸ್ಪತ್ರೆಗೆ ಬರುವವರಿಗೆ ಸುಸಜ್ಜಿತ ಪ್ರತ್ಯೇಕ ಶೌಚಾಲಯ ಇಲ್ಲದೇ ಪರಿತಪ್ಪಿಸುತ್ತಿದ್ದಾರೆ. ತಕ್ಷಣ ಮಹಿಳೆಯರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸುಲಭ್ ಶೌಚಾಲಯವನ್ನು ನೂತನವಾಗಿ ನಿರ್ಮಾಣ ಮಾಡಿ ಉತ್ತಮ ಶೌಚಾಲಯ ಸೇವೆ ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು.
ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ರವೀದ್ರ ಬಿ.ಗೌಡ, ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್, ಉಪ ತಹಸೀಲ್ದಾರ್ ಶಿವಲಿಂಗಯ್ಯ, ಗ್ರಾಪಂ ಅಧ್ಯಕ್ಷೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ತೊರೆಬೊಮ್ಮನಹಳ್ಳಿ ಸಿದ್ದರಾಮೇಗೌಡ ಚನ್ನಶೆಟ್ಟಿ, ಗುಡಿಗೆರೆ ಪ್ರಸಾದ್, ಆಡಳಿತ ವೈದ್ಯಾಧಿಕಾರಿ ಡಾ. ಅರ್ಜುನ್‌ಕುಮಾರ್, ಡಾ.ಜಗದೀಶ್, ಡಾ.ಮಧುರ, ಪಿಡಿಒ ಸುಧಾ ಸೇರಿದಂತೆ ಹಲವರಿದ್ದರು.