ಮುರಳೀಧರ್ ಶಾಂತಳ್ಳಿಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಸ್ಥಳೀಯ ಡಾಲ್ಫಿನ್ಸ್ ತಂಡ ಹಾಗೂ ಯುಎಸ್ಸಿ ಬೇರಳಿನಾಡು ತಂಡಗಳು ಫೈನಲ್ ಪ್ರವೇಶಿಸಿವೆ. ಶನಿವಾರದಂದು ನಡೆದ ಮೊದಲ ಪಂದ್ಯಾಟದಲ್ಲಿ ಕೂಡಿಗೆ ಕ್ರೀಡಾ ನಿಲಯದ ತಂಡದ ಎದುರು ಬೇರಳಿ ನಾಡು ತಂಡ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿತು. ವಿಜೇತ ತಂಡದ ಪರ ಅಂತಾರಾಷ್ಟ್ರೀಯ ಆಟಗಾರ ಮಹ್ಮದ್ ರಾಹೀಲ್ ಮತ್ತು ವೆಂಕಟೇಶ್ ಕಂಜ ಗೋಲು ಗಳಿಸಿದರು. ಪರಾಜಿತ ತಂಡದ ಪರ ಲಿಖಿತ್ ಒಂದು ಗೋಲನ್ನು ಗಳಿಸಿದರು. ಎರಡನೇ ಸೆಮಿಫೈನಲ್ ಪಂದ್ಯಾಟದಲ್ಲಿ ಅತಿಥೇಯ ಡಾಲ್ಫಿನ್ಸ್ ತಂಡ ಕಕ್ಕಬ್ಬೆಯ ಮಲ್ಮ ತಂಡವನ್ನು ಟೈ ಬ್ರೇಕರ್ ನಲ್ಲಿ ಪರಾಜಯ ಗೊಳಿಸಿ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತು. ಕೊನೆಯ ಕ್ವಾರ್ಟರ್ ಆರಂಭವಾಗುವ ಮುನ್ನ 3-2 ಗೋಲುಗಳ ಮುನ್ನಡೆಯಲ್ಲಿದ್ದ ಡಾಲ್ಫಿನ್ಸ್ ತಂಡ, ನಾಲ್ಕನೇ ಕ್ವಾರ್ಟರ್ ನಲ್ಲಿ ಮಲ್ಮ ತಂಡದ ಆಟಗಾರ ಸುನಿಲ್ 42ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ 3-3 ಡ್ರಾ ಆಗುವಂತೆ ನೋಡಿಕೊಂಡರು. ನಂತರ ಜರುಗಿದ ರೋಚಕ ಟೈ ಬ್ರೇಕರ್ ನಲ್ಲಿ 4-3 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಅತಿಥೇಯ ತಂಡ ಫೈನಲ್ ಪ್ರವೇಶಿಸಿತು. ರೋಚಕ ಘಟ್ಟದಲ್ಲಿ ಕೊನೆಯ ಪೆನಾಲ್ಟಿ ಯನ್ನು ಡಾಲ್ಫಿನ್ಸ್ ತಂಡದ ಗೋಲ್ ಕೀಪರ್ ಯಶಸ್ವಿಯಾಗಿ ತಡೆಯುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಡುವಲ್ಲಿ ಸಫಲರಾದರು.ಮಾಜಿ ನಾಯಕ ಎಂ.ಎಂ.ಸೋಮಯ್ಯರಿಂದ ಹಾಕಿ ವೀಕ್ಷಣೆ: ಡಾಲ್ಫಿನ್ಸ್ ಕ್ಲಬ್ ನಿಂದ ಗೌರವ ಅರ್ಪಣೆಶುಕ್ರವಾರದ ಪಂದ್ಯಾಟವನ್ನು ಪೋತ್ಸಾಹಿಸಲು ಭಾರತದ ಹಾಕಿ ತಂಡದ ಮಾಜಿ ನಾಯಕ, ಸೋಲ್ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಒಲಂಪಿಯನ್ ಕೊಡಗಿನ ಮನೆಯಪಂಡ ಸೋಮಯ್ಯ ಅವರು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ಸಂದರ್ಭ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇಂದು ಡಾಲ್ಫಿನ್ಸ್ ಮತ್ತು ಬೇರಳಿನಾಡು ತಂಡಗಳ ಫೈನಲ್:ಭಾನುವಾರದಂದು ಮಧ್ಯಾಹ್ನ 2 ಗಂಟೆಗೆ ಫೈನಲ್ ಪಂದ್ಯಾಟ ಜರುಗಲಿದ್ದು, ಫೈನಲ್ ನಲ್ಲಿ ಜಯಶಾಲಿಯಾಗುವ ತಂಡಕ್ಕೆ ಕುಶಾಲನಗರದ ಉದ್ಯಮಿ ವೇಣು ಅವರು ತಮ್ಮ ತಂದೆ ದಿ.ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ ನೀಡಿರುವ ಆಕರ್ಷಕ ಟ್ರೋಫಿ ಮತ್ತು 1 ಲಕ್ಷ ನಗದು, ರನ್ನರ್ ತಂಡಕ್ಕೆ ರೂ. 50ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ಫೈನಲ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಚಾಮರಾಜ ಒಡೆಯರ್, ಶಾಸಕ ಡಾ.ಮಂತರ್ ಗೌಡ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ, ಅಂತಾರಾಷ್ಟ್ರೀಯ ಆಟಗಾರರಾದ ಅರ್ಜುನ್ ಹಾಲಪ್ಪ, ಎಸ್.ವಿ.ಸುನಿಲ್, ವಿಕ್ರಂ ಕಾಂತ್, ಹಾಕಿ ಕೂರ್ಗ್ ಅಧ್ಯಕ್ಷ ಲವಕುಮಾರ್, ಟ್ರೋಫಿ ಮತ್ತು ನಗದು ದಾನಿಗಳಾದ ಲಲಿತಾ ರಂಗಸ್ವಾಮಿ, ವೇಣು, ವಿನಯ್, ವಿಜಯ್ ಮತ್ತು ಡಾಲ್ಫಿನ್ಸ್ ಅಧ್ಯಕ್ಷ ಎಂ.ಈ.ಮಹೇಶ್ ಮಾಟ್ನಳ್ಳಿ, ಗೌರವ ಅಧ್ಯಕ್ಷ ಅಶೋಕ್ ಮತ್ತಿತರರು ಉಪಸ್ಥಿತರಿರುವರು.