ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳ ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕಿದೆ.
ಕನ್ನಡಪ್ರಭ ವಾರ್ತೆ ಗದಗ
ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳ ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಈಗ ಆಯೋಜಿಸಲಾದ ಕಾರ್ಯಾಗಾರದ ಸದುಪಯೋಗವನ್ನು ಪ್ರತಿಯೊಬ್ಬ ಸಿಬ್ಬಂದಿಯೂ ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್. ಕರೆ ನೀಡಿದರು.ಶುಕ್ರವಾರ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ಮಾದಕ ದ್ರವ್ಯ ದುಶ್ಚಟಗಳ ತಡೆಗಟ್ಟುವಿಕೆ, ಅಗ್ನಿ ಸುರಕ್ಷತೆ ಜಾಗೃತಿ ಹಾಗೂ ವಸತಿ ನಿಲಯಗಳ ನಿರ್ವಹಣೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಿಬ್ಬಂದಿಗೆ ವೃತ್ತಿಪರತೆ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಸ್ಪಷ್ಟ ಅರಿವು ಮೂಡಿಸಲು ಇಂತಹ ಕಾರ್ಯಾಗಾರ ಅಗತ್ಯವಾಗಿದ್ದು, ಇಲ್ಲಿ ನೀಡಲಾಗುವ ತರಬೇತಿಯನ್ನು ಸಿಬ್ಬಂದಿ ದೈನಂದಿನ ಕಾರ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ವಸತಿ ಶಾಲೆ ಹಾಗೂ ನಿಲಯಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ನಿಲಯಪಾಲಕರು, ಅಡುಗೆಯವರು ಮತ್ತು ಸಿಬ್ಬಂದಿ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ವಿದ್ಯಾರ್ಥಿಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡು ಅವರಿಗೆ ಮಾದರಿಯಾಗಬೇಕು. ಮಕ್ಕಳಿಗೆ ಸ್ವಚ್ಛತೆ, ಆರೋಗ್ಯ ಹಾಗೂ ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಗುಣಮಟ್ಟದ ಆಹಾರ ತಯಾರಿಕೆ ಹಾಗೂ ದಾಖಲಾತಿಗಳ ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.ಗದಗ ಗ್ರಾಮೀಣ ಸಿಪಿಐ ಸಿದ್ದರಾಮೇಶ್ವರ ಗಡೇದ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ಗಂಭೀರ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರೆ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ವೈ. ತುರನೂರ ಬೆಂಕಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಂದ್ರ ಎಸ್. ಗಡಾದ ಆಹಾರ ಸುರಕ್ಷತೆಯ ಕುರಿತು ಮಾರ್ಗದರ್ಶನ ನೀಡಿದರು. ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ಬಸವರಾಜ ಬಡಿಗೇರ ಹಾಗೂ ಗೋಪಾಲ ಲಮಾಣಿ ನಿಲಯಗಳ ನಿರ್ವಹಣಾ ವಿಧಾನ ವಿವರಿಸಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಂ. ತುಂಬರಮಟ್ಟಿ, ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರು, ಕ್ರೈಸ್ ವಸತಿ ಶಾಲೆಗಳ ಡಿಸಿಒ ಅಶೋಕ ಕರಣಿ, ಪ್ರಾಂಶುಪಾಲರು, ಸಹಾಯಕ ನಿರ್ದೇಶಕರು, ನಿಲಯಪಾಲಕರು ಹಾಗೂ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.