ಮೂಲಸೌಕರ್ಯಕ್ಕಾಗಿ ಹಾಸ್ಟೆಲ್‌ ವಿದ್ಯಾರ್ಥಿಗಳ ಪ್ರತಿಭಟನೆ

| Published : Nov 06 2025, 02:30 AM IST

ಮೂಲಸೌಕರ್ಯಕ್ಕಾಗಿ ಹಾಸ್ಟೆಲ್‌ ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ಪಟ್ಟಣದಲ್ಲಿ ಮ್ಯಾಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಕ್ಕಾಗಿ ಬುಧವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಶಿಗ್ಗಾಂವಿ: ಪಟ್ಟಣದಲ್ಲಿ ಮ್ಯಾಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಕ್ಕಾಗಿ ಬುಧವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಶಿಗ್ಗಾಂವಿಯ ಸುಮಾರು ೬೦ರಿಂದ ೭೦ ವಿದ್ಯಾರ್ಥಿಗಳು ಬೆಳಗ್ಗೆ ಸುಮಾರು ನಾಲ್ಕು ಗಂಟೆ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿ ಮುಖಂಡ ಕುಮಾರ್ ಶಿವಾನಂದ ದೊಡ್ಡಮನಿ ನೇತೃತ್ವ ವಹಿಸಿದ್ದರು.

ಹಾಸ್ಟೆಲ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಬೆಡ್, ಕಾಟು ಇಲ್ಲ. ಊಟದ ಹಾಲ್ ಚಿಕ್ಕದಾಗಿದೆ. ಕಂಪ್ಯೂಟರ್ ಲ್ಯಾಬ್ ಇಲ್ಲ. ಸದ್ಯ ನಿರ್ಮಾಣವಾಗುತ್ತಿರುವ ಹಾಸ್ಟೆಲ್ ಕಟ್ಟಡ ಪಟ್ಟಣದಿಂದ ಸುಮಾರು ೭ ಕಿಲೋಮೀಟರ್ ಅಂತರದಲ್ಲಿ, ಅದರಲ್ಲೂ ಗುಡ್ಡದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಆ ಸ್ಥಳದ ಬದಲು ಪಟ್ಟಣದಲ್ಲಿ ಇರುವ ಪುರಸಭೆ ವ್ಯಾಪ್ತಿಯ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಡಬೇಕು. ಈಗ ಕಟ್ಟಡ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿ ಬಸ್‌ ಸೌಕರ್ಯವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಯಲ್ಲಪ್ಪ ಗೋಣೇನ್ನವರ ಅವರು ಮೂಲಸೌಲಭ್ಯ ಒದಗಿಸುವ ಭರವಸೆ ನೀಡಿದರು. ಆದರೆ ಹಾಸ್ಟೆಲ್‌ ಕಟ್ಟಡ ಸ್ಥಳ ಬದಲಿಸುವುದು ಸರ್ಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸ, ಕಾಲಾವಕಾಶ ಅಗತ್ಯ ಎಂದರು. ಆದರೆ ವಿದ್ಯಾರ್ಥಿಗಳು ಕೈಬಿಡಲು ಒಪ್ಪಲಿಲ್ಲ. ಮಧ್ಯಾಹ್ನ ೩.೩೦ಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮನವೊಲಿಸುವ ಯತ್ನ ಮಾಡಿದರು.

ಶಿಗ್ಗಾಂವಿ ಪಟ್ಟಣದಲ್ಲಿಯೇ ಹಳೆಯ ಬಸ್ ನಿಲ್ದಾಣದ ಎದುರು ಇರುವ ೨೯ ಗುಂಟೆ, ತಾಪಂ ಧರ್ಮಶಾಲೆಯ ಖುಲ್ಲಾ ಜಾಗೆ ಅಥವಾ ತಾಪಂ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಪಕ್ಕದಲ್ಲಿ ಅಥವಾ ಎದುರುಗಡೆ ಇರುವ ನಿವೇಶನ, ಶಿಗ್ಗಾಂವಿ ಪುರಸಭೆ ವ್ಯಾಪ್ತಿಯ ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ನಿವೇಶನಗಳನ್ನು ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಹೇಳಿದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಲಿಖಿತ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.