ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ವಸತಿ ಶಾಲೆ ಹಾಗೂ ವಸತಿ ನಿಲಯಗಳ ಎಲ್ಲ ಸಿಬ್ಬಂದಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಅಲ್ಲಿನ ವ್ಯವಸ್ಥೆ ಸ್ವರ್ಗದಂತೆ ಗೋಚರಿಸುತ್ತದೆ. ಹೊಂದಾಣಿಕೆ ಕೊರತೆ ಉಂಟಾದಲ್ಲಿ ನರಕ ಸದೃಶವಾಗಿ ಅದು ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳ ಸಿಬ್ಬಂದಿಗಳಿಗೆ ಆಯೋಜಿಸಲಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಸತಿ ಶಾಲೆ ಹಾಗೂ ವಸತಿ ನಿಲಯ ವಿದ್ಯಾರ್ಥಿಗಳಿಗೆ ನಿಲಯ ಪಾಲಕರೇ ಪೋಷಕ ರಾಗಿದ್ದು, ವಸತಿ ನಿಲಯದ ವಿದ್ಯಾರ್ಥಿಗಳನ್ನು ಮಕ್ಕಳ ರೀತಿಯಲ್ಲಿ ಕಾಣಬೇಕು. ತಪ್ಪು ಮಾಡಿದಾಗ ಎಚ್ಚರಿಸಿ, ಉತ್ತಮ ಕೆಲಸ ಮಾಡಿದಾಗ ಗೌರವಿಸಿ, ಪ್ರೀತಿ ತೋರಬೇಕು. ಹಾಸ್ಟೆಲ್ ಗಳಲ್ಲಿ ಕಡ್ಡಾಯವಾಗಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು.
ಬಡತನ ರೇಖೆಗಿಂತ ಕೆಳಗಿನ ವರ್ಗದ ಮಕ್ಕಳು, ಮಧ್ಯಮವರ್ಗದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‍ನಲ್ಲಿ ಪ್ರವೇಶಾವಕಾಶ ಪಡೆಯುತ್ತಾರೆ. ಸರ್ಕಾರ ನೀಡುವ ಅನುದಾನದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ನೀರು, ಶುಚಿತ್ವ ಹಾಗೂ ಉತ್ತಮ ವಾತಾವರಣ ಕಲ್ಪಿಸಬೇಕು.ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಗ್ರಂಥಾಲಯ ಹಾಗೂ ದಿನಪತ್ರಿಕೆಗಳು ಅಗತ್ಯವಾಗಿ ಇರಬೇಕು. ಇದರ ಜೊತೆಗೆ ಪ್ರತಿಭಾವಂತ ಶಿಕ್ಷಕರಿಂದ ತರಗತಿ, ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಆಯೋಜಿಸಿ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಕರೆಸಿ ಉಪನ್ಯಾಸ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕುಮಾರಸ್ವಾಮಿ ಸಲಹೆ ನೀಡಿದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾತನಾಡಿ, ಜಿಲ್ಲೆಯ ಎಲ್ಲಾ ವಸತಿ ನಿಲಯಗಳ ನಿಲಯ ಪಾಲಕರು, ವಸತಿ ಶಾಲೆಗಳ ಪ್ರಾಂಶುಪಾಲರು, ಅಡುಗೆ ಸಿಬ್ಬಂದಿಗೆ ಪುನಶ್ವೇತನ ತರಬೇತಿ ನೀಡಿ, ನಿಲಯ ನಿರ್ವಹಣೆ ಹೇಗೆ ಮಾಡಬೇಕು. ನಿಲಯ ನಿರ್ವಹಣೆಯಲ್ಲಿ ಯಾವ ರೀತಿಯಾಗಿ ಜಾಗೃತಿ ವಹಿಸಬೇಕು ಎನ್ನುವುದನ್ನು ತಿಳಿಸಲು ಸರ್ಕಾರದ ಆದೇಶದ ಅನ್ವಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಿಕೆ ಎನ್ನುವುದು ನಿತ್ಯನಿರಂತವಾದುದು. ಹಾಗಾಗಿ ತರಬೇತಿಯಲ್ಲಿ ಪಡೆದ ಜ್ಞಾನವನ್ನು ನಿತ್ಯದ ಕೆಲಸದಲ್ಲಿ ಬಳಸಬೇಕು. ವಸತಿ ನಿಲಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಸಂವಿಧಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಇದೇ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಓ.ಪರಮೇಶ್ವರಪ್ಪ ಅವರು ವಸತಿ ಶಾಲೆ ಹಾಗೂ ವಸತಿ ನಿಲಯದ ಸಿಬ್ಬಂದಿಗೆ ಸಂವಿಧಾನ ಪೀಠಿಕೆ ಬೋಧಿಸಿದರು.ತರಬೇತಿ ಕಾರ್ಯಾಗಾರದಲ್ಲಿ ನಿಲಯಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಬಗೆ, ನಿಲಯಗಳಲ್ಲಿ ದಾಸ್ತಾನು ಕೊಠಡಿ ನಿರ್ವಹಣೆ, ಶುಚಿಯಾದ ಆಹಾರ ತಯಾರಿಕೆ ಹಾಗೂ ಆಹಾರ ಸಂರಕ್ಷಣೆ, ಸೆಪ್ಟಿಕ್ ಟ್ಯಾಂಕ್ ಹಾಗೂ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಹಾಗೂ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಹಾಗೂ ದಾಖಲಾತಿ ನಿರ್ವಹಣೆ, ನಿಲಯದಲ್ಲಿ ತರಬೇತಿ ನಂತರದಲ್ಲಿ ಪ್ರಾತ್ಯಕ್ಷಿಕತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.ಜಿಲ್ಲಾ ಅಂಕಿತ ಅಧಿಕಾರಿ ಡಾ.ಪಾಲಾಕ್ಷಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಪ್ರಜ್ವಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ವಿ.ಕೃಷ್ಣಮೂರ್ತಿ, ದಿನೇಶ್, ಟಿ.ಎನ್.ಮಾಲತಿ, ಕುಮಾರಸ್ವಾಮಿ, ಕಾಳಮ್ಮ, ಮಂಜುನಾಥ್ ಸೇರಿದಂತೆ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳ ಸಿಬ್ಬಂದಿಗಳು ಇದ್ದರು.