ಮುಂದಿನ ವರ್ಷದಿಂದ ಪಿಯುಸಿ ಮಕ್ಕಳಿಗೂ ಬಿಸಿಯೂಟ ಹಾಗೂ ಪಠ್ಯ ಪುಸ್ತಕ, ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಾಗರ: ಮುಂದಿನ ವರ್ಷದಿಂದ ಪಿಯುಸಿ ಮಕ್ಕಳಿಗೂ ಬಿಸಿಯೂಟ ಹಾಗೂ ಪಠ್ಯ ಪುಸ್ತಕ, ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈತನಕ ಎಸ್.ಎಸ್.ಎಲ್.ಸಿ.ವರೆಗಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ನೋಟ್ ಪುಸ್ತಕ ಹಾಗೂ ಪಠ್ಯಪುಸ್ತಕ ನೀಡಲಾಗುತ್ತಿದೆ. ಇದನ್ನು ಪಿಯುಸಿವರೆಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದರು.ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ ಎಮದ ಅವರು, ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿ ಸಂಗೀತ ಕುರಿತು ಆಸಕ್ತಿ ಮೂಡಿಸಲಾಗುತ್ತದೆ. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ. ಅವರು ಅವಕಾಶ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಅವರಲ್ಲಿನ ಸಾಂಸ್ಕೃತಿಕ ಮನಸ್ಸುಗಳನ್ನು ಬಡಿದೆಬ್ಬಿಸುವ ಕೆಲಸವಾಗಬೇಕು. ರಾಜ್ಯದಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದ್ದು ಇಲ್ಲಿ ಸಾಂಸ್ಕೃತಿಕ ಚಟುವಟಿಕೆ ಪ್ರೋತ್ಸಾಹಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಎರಡು ದಿನಗಳ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಪೋಷಕರು, ದಾನಿಗಳು, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಕೈಜೋಡಿಸಿದ್ದಾರೆ. ಎಲ್ಲರ ಸಹಕಾರ ಸಿಕ್ಕಾಗ ಮತ್ರ ಇಂತಹ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿಯೆ ಅತಿಹೆಚ್ಚು ಮಕ್ಕಳನ್ನು ಹೊಂದಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಶಿಫಾರಸ್ಸು ಪತ್ರ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಇನ್ನಷ್ಟು ಸೌಲಭ್ಯದ ಅಗತ್ಯವಿದ್ದು ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಹೇಳಿದರು.ಡಾ.ಆರ್.ಎಂ.ಮಂಜುನಾಥ ಗೌಡ, ಶ್ರೀಕಾಂತ್, ವಿದ್ಯಾಧರ, ಚಂದ್ರಪ್ಪ ಗುಂಡುಪಲ್ಲಿ, ಬಿ.ಎ.ಇಂದೂಧರ ಬೇಸೂರು, ಉಮೇಶ್, ಬಸವರಾಜ್, ಲೋಕೇಶ್, ಉಮೇಶ್, ಭವ್ಯ, ಡಾ.ಸರ್ಫ್ರಾಜ್ ಚಂದ್ರಗುತ್ತಿ ಇತರರು ಹಾಜರಿದ್ದರು. ನಂತರ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.