ತಾಲೂಕಿನಲ್ಲಿ ಬಿಸಿಲಿಗೆ ಜನ ಬಸವಳಿದಿದ್ದಾರೆ. ಬಿಸಿಲೇರುತ್ತಿದ್ದಂತೆ ರಸ್ತೆಗಳು ಖಾಲಿ ಖಾಲಿ, ತಂಪು ಪಾನೀಯ, ಹಣ್ಣಿನಂಗಡಿ, ಎಳನೀರು ವ್ಯಾಪಾರ ಜೋರಾಗಿದೆ.
ಹಾನಗಲ್ಲ : ತಾಲೂಕಿನಲ್ಲಿ ಬಿಸಿಲಿಗೆ ಜನ ಬಸವಳಿದಿದ್ದಾರೆ. ಬಿಸಿಲೇರುತ್ತಿದ್ದಂತೆ ರಸ್ತೆಗಳು ಖಾಲಿ ಖಾಲಿ, ತಂಪು ಪಾನೀಯ, ಹಣ್ಣಿನಂಗಡಿ, ಎಳನೀರು ವ್ಯಾಪಾರ ಜೋರಾಗಿದೆ.ಹಾನಗಲ್ಲಿನಲ್ಲಿ ಬಿಸಿಲಿನ ತಾಪ ೩೮ರಿಂದ ೪೦ ಡಿಗ್ರಿ ಸೆಲ್ಸಿಯಸ್‌ವರೆಗೆ ಓಡಾಡುತ್ತಿದೆ. ಬಿಸಿಲಿಗೆ ಜನ ಕಂಗಾಲಾಗಿದ್ದಾರೆ. ಸರ್ಕಾರಿ ಕಚೇರಿಗಳಿಗೂ ಕೂಡ ಬಿಸಿಲಿನ ತಾಪ ತಟ್ಟಿ ದಟ್ಟಣೆ ಕಡಿಮೆಯಾಗಿದೆ. ರಸ್ತೆಗಳಲ್ಲಿ ವಾಹನ ಓಡಾಟವೂ ವಿರಳವಾಗಿದೆ. ಅನಿವಾರ್ಯ ಕೆಲಸಗಳಿಗೆ ತಾಲೂಕು ಕೇಂದ್ರಕ್ಕೆ ಬಂದ ಜನ ಜ್ಯೂಸ್ ಹಾಗೂ ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳು, ಎಳನೀರಿಗೆ ಮೊರೆ ಹೋಗಿದ್ದಾರೆ. ಹೊಟೆಲ್ ಸೇರಿದಂತೆ ವಿವಿಧ ದಿನಸಿಗಳ ವ್ಯಾಪಾರವೂ ಕೂಡ ತೀರ ಕಡಿಮೆಯಾಗಿದೆ. ಐಸ್‌ಕ್ರೀಂ ಅಂಗಡಿಗಳಲ್ಲಿ ಕೂಡ ಹೆಚ್ಚು ಜನ ದಟ್ಟಣೆ ಇದೆ.ಶಾಲಾ ಕಾಲೇಜುಗಳಿಗೆ ರಜೆ ಇದೆಯಾದರೂ ಕೂಡ ಅಲ್ಲಲ್ಲಿ ಕೆಲವರು ರಜಾ ಅವಧಿಯ ವರ್ಗಗಳನ್ನು ನಡೆಸುತ್ತಾರೆ. ಅದಕ್ಕೂ ಕೂಡ ವಿದ್ಯಾರ್ಥಿಗಳಿ ಸಂಖ್ಯೆ ಕಡಿಮೆಯೇ ಇದೆ. ಉಚಿತ ವರ್ಗಗಳಿಗೂ ಕೂಡ ವಿದ್ಯಾರ್ಥಿಗಳು ಬರುತ್ತಿಲ್ಲ. ಪಾಲಕರು ಮಕ್ಕಳನ್ನು ಮನೆಗಳಿಂದ ಹೊರಗೆ ಬಿಡಲು ಮುಂದಾಗುತ್ತಿಲ್ಲ. ಅಲ್ಲದೆ ಆಟದ ಮೈದಾನಗಳಲ್ಲಿ ಕೂಡ ಜನ ದಟ್ಟಣೆ ಇಲ್ಲ. ಇದೆಲ್ಲ ಬಿಸಿಲಿನ ಮಹಿಮೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.ಬಿಸಿಲಿನ ತಾಪ ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಒಂದು ತಿಂಗಳಿನಿಂದ ವ್ಯಾಪಾರವೂ ಚೆನ್ನಾಗಿದೆ. ಚೌಕಾಸಿ ಇಲ್ಲದೆ ಜನ ತಂಪು ಪಾನೀಯಕ್ಕೆ ಮೊರೆ ಹೋಗಿದ್ದಾರೆ. ಇನ್ನೂ ಒಂದು ತಿಂಗಳಾದರೂ ಇಂತಹ ಬಿಸಿಲು ಇರಬಹುದು ಎಂಬ ಚರ್ಚೆ ನಡೆಯುತ್ತಿದೆ. ವ್ಯಾಪಾರ ಹೆಚ್ಚಾಗಿದೆ ಎಂಬುದೇನೋ ಸತ್ಯ. ಆದರೆ ಜನ ಬಿಸಿಲಿಗೆ ಕಂಗಾಗಲಾಗಿರುವುದಂತು ಸತ್ಯ ಎಂದು ತಂಪು ಪಾನೀಯ ಅಂಗಡಿ ಮಾಲೀಕ ನಾಗರಾಜ ನಿಟಗಿನಕೊಪ್ಪಹೇಳಿದರು.ಬೆಳಗ್ಗೆ ೧೧ ಗಂಟೆಯ ನಂತರ ವ್ಯಾಪಾರ ತೀರ ಕಡಿಮೆ ಆಗಿದೆ. ಗ್ರಾಮೀಣ ಜನ ಪಟ್ಟಣಕ್ಕೆ ಬರುವುದೇ ಬೆಳಗ್ಗೆ ೧೧ ಗಂಟೆಯ ಮೇಲೆ. ಆದರೆ ಬಿಸಿಲಿನ ತಾಪದಿಂದಾಗಿ ಜನ ಬರುವುದು ಕಡಿಮೆಯಾಗಿ ವ್ಯಾಪಾರ ಕುಂಠಿತಗೊಂಡಿದೆ. ತೀರ ಅಗತ್ಯಕ್ಕೆ ಮಾತ್ರ ಕೆಲವರು ಸಂಜೆ ಹೊತ್ತಿಗೆ ಪಟ್ಟಣಕ್ಕೆ ಬರುತ್ತಾರೆ. ಸಂಜೆ ಹಾಗೂ ಬೆಳಗ್ಗೆ ಸ್ವಲ್ಪ ಮಟ್ಟಿನ ವ್ಯಾಪಾರ ಬಿಟ್ಟರೆ ಇಡೀ ದಿನ ಗಿರಾಕಿಗಳಿಗಾಗಿ ಕಾಯುವುದೇ ಆಗಿದೆ ಎಂದು ಹೊಟೇಲ್ ಮಾಲೀಕ ಮಂಜಯ್ಯ ಶೆಟ್ಟಿ ಹೇಳಿದರು.