ಸಾರಾಂಶ
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತಿ ಕಾಳಜಿ ತೋರುವ ಹೆತ್ತವರು ಹಲವು ಬಾರಿ ಅವರ ಆಯ್ಕೆಗಳ ವಿಷಯದಲ್ಲಿ ಎಡವುತ್ತಾರೆ. ಅತಿಯಾದ ಶೈಕ್ಷಣಿಕ ಒತ್ತಡ ಮಕ್ಕಳ ಮನೋವಿಕಾಸ ಕುಗ್ಗಿಸಿ ಭವಿಷ್ಯಕ್ಕೆ ಹೊಡೆತ ನೀಡಬಲ್ಲದು. ಹೀಗಾಗಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದೇ ಶಿಕ್ಷಣದ ಬಹುಮುಖ್ಯ ಆದ್ಯತೆ ಆಗಿರಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಮಕ್ಕಳನ್ನು ಕೃತಕತೆಯ ಭಾವಗಳಿಗೆ ತಳುಕು ಹಾಕಿ ಅವರ ಬಾಲ್ಯದ ಮುಗ್ದತೆಯನ್ನು ನಾವು ನಾಶಗೊಳಿಸದಿರೋಣ ಎಂದು ಹೊಟೇಲ್ ಉದ್ಯಮಿ ಡಾ. ಶ್ವೇತಾ ಮಡಪ್ಪಾಡಿ ತಿಳಿಸಿದರು.ನಗರದ ರೋಟರಿ ಬೃಂದಾವನ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಮಕ್ಕಳ ಪದವಿ ಪ್ರಧಾನ ಹಾಗೂ ಅಜ್ಜ- ಅಜ್ಜಿಯರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಕ್ಕಳು ನಮ್ಮ ಸಮಾಜದ ನೆಮ್ಮದಿಯ ಕೇಂದ್ರಗಳು. ಅವರ ಒಡನಾಟ ಬದುಕಿನ ಯಾಂತ್ರಿಕತೆಯ ಒತ್ತಡವನ್ನು ಕಡಿಮೆ ಮಾಡಬಲ್ಲವು. ಆದರೆ, ಮಕ್ಕಳ ಬಾಲ್ಯದ ಸಂಭ್ರಮವನ್ನು ಅವರ ಮೇಲೆ ಶೈಕ್ಷಣಿಕ ಒತ್ತಡವನ್ನು ಹೇರುವುದರ ಮೂಲಕ ನಾವು ನಾಶಗೊಳಿಸುತ್ತಿದ್ದೇವೆ ಎಂದು ವಿಷಾದಿಸಿದರು.
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತಿ ಕಾಳಜಿ ತೋರುವ ಹೆತ್ತವರು ಹಲವು ಬಾರಿ ಅವರ ಆಯ್ಕೆಗಳ ವಿಷಯದಲ್ಲಿ ಎಡವುತ್ತಾರೆ. ಅತಿಯಾದ ಶೈಕ್ಷಣಿಕ ಒತ್ತಡ ಮಕ್ಕಳ ಮನೋವಿಕಾಸ ಕುಗ್ಗಿಸಿ ಭವಿಷ್ಯಕ್ಕೆ ಹೊಡೆತ ನೀಡಬಲ್ಲದು. ಹೀಗಾಗಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದೇ ಶಿಕ್ಷಣದ ಬಹುಮುಖ್ಯ ಆದ್ಯತೆ ಆಗಿರಬೇಕು ಎಂದು ಅವರು ಹೇಳಿದರು.ರೋಟರಿ ಬೃಂದಾವನದ ಮುಖ್ಯಸ್ಥ ಎ.ಜಿ. ನಂಜಪ್ಪಸ್ವಾಮಿ, ಕಾರ್ಯದರ್ಶಿ ಮಂಜುನಾಥ್, ನಾಗೇಶ್, ಪ್ರಕಾಶ್ ಹನಸೋಗೆ, ಶಾಲೆಯ ಮುಖ್ಯ ಶಿಕ್ಷಕಿ ಎಂ.ಎಸ್. ಉಷಾ ಇದ್ದರು.