ಅಪಘಾತಗಳ ಹಾಟ್‌ಸ್ಪಾಟ್ ಅರಬೈಲ್ ಘಟ್ಟ!

| Published : May 20 2025, 11:46 PM IST

ಸಾರಾಂಶ

ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದ ಹೆದ್ದಾರಿಯಾಗಿ ಗುರುತಿಸಿಕೊಳ್ಳುವಲ್ಲಿ ವಿಫಲವಾಗುತ್ತಲೇ ಇರುವುದಕ್ಕೆ ಬೇರೆ ಬೇರೆ ಕಾರಣಗಳಿವೆ.

ಶಂಕರಭಟ್‌ ತಾರೀಮಕ್ಕಿ ಯಲ್ಲಾಪುರ

ತಾಲೂಕಿನ ಅರಬೈಲ್ ಘಟ್ಟದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಅಪಘಾತಗಳ ಹಾಟ್‌ಸ್ಪಾಟ್ ಎಂದೇ ಖ್ಯಾತಿ ಪಡೆಯುತ್ತಿದ್ದು, ಕಳೆದ ೫ ವರ್ಷಗಳಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಹಲವು ವಾಹನಗಳು ಜಖಂಗೊಂಡು ನೂರಾರು ಜನ ಗಂಭೀರ ಗಾಯಗೊಂಡಿದ್ದಾರೆ.

ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದ ಹೆದ್ದಾರಿಯಾಗಿ ಗುರುತಿಸಿಕೊಳ್ಳುವಲ್ಲಿ ವಿಫಲವಾಗುತ್ತಲೇ ಇರುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಹೆದ್ದಾರಿಯು ಕಡಿದಾದ ಅರಣ್ಯ, ಬೆಟ್ಟ, ಗುಡ್ಡಗಳ ನಡುವೆ ಸಾಗಿಹೋಗಿದ್ದು, ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದರೂ ಹೆದ್ದಾರಿ ಅಗಲೀಕರಣ ಸಾಧ್ಯ ಆಗದಿರುವುದು, ಪರಿಸರ ನಾಶದ ಭಯವೂ ಕಾರಣವಾಗಿದ್ದು, ಚತುಷ್ಪಥ ಆಗಬೇಕಿದ್ದ ಹೆದ್ದಾರಿ ಇನ್ನೂ ಕಿರಿದಾದ ರಸ್ತೆಯಲ್ಲಿಯೆ ಮುಂದುವರಿದಿದೆ.

ಅರಬೈಲ್ ಘಟ್ಟದಲ್ಲಿ ಅದಿರು ಮಿಶ್ರಿತ ಮಣ್ಣಿನ ಬೆಟ್ಟಗಳಿದ್ದು, ಭಾರಿ ಮಳೆಗೆ ಗುಡ್ಡ ಕುಸಿತದ ಘಟನೆಗಳು ಪುನರಾವರ್ತನೆಗೊಳ್ಳುತ್ತಿವೆ. ಕಳೆದೆರಡು ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿ, ಹೆದ್ದಾರಿ ಕೊಚ್ಚಿ ಹೋಗಿತ್ತು.

೪೧ ಜನರ ಬಲಿ: ಕಳೆದ ೫ ವರ್ಷಗಳಲ್ಲಿ ೪೧ ಜನರ ಬಲಿ ಪಡೆದ ಹೆದ್ದಾರಿ ಹಲವು ಕುಟುಂಬಗಳು ಬೀದಿಪಾಲಾಗಲು ಕಾರಣವಾಗಿದೆ. ೨೦೨೦ರಲ್ಲಿ ೨೯ ಅಪಘಾತ ೭ ಸಾವು, ೨೦೨೧ರಲ್ಲಿ ೪೭ ಅಪಘಾತ ೮ ಸಾವು, ೨೦೨೨ರಲ್ಲಿ ೪೯ ಅಪಘಾತ ೬ ಸಾವು, ೨೦೨೩ರಲ್ಲಿ ೪೦ ಅಪಘಾತ ೩ ಸಾವು, ೨೦೨೪ರಲ್ಲಿ ೩೪ ಅಪಘಾತ ೬ ಸಾವು, ೨೦೨೫ರಲ್ಲಿ ೧೩ ಅಪಘಾತ ೧೧ ಸಾವು ಕಂಡಿದೆ.

ಅಪಘಾತ ಸ್ಥಳದಿಂದ ಕೇಸು ದಾಖಲಿಸದೆ ಹಾಗೇ ಪ್ರವಾಸ ಮುಂದುವರಿಸಿದ ಪ್ರಕರಣ ಸಾಕಷ್ಟಿದೆ. ಕೆಲವು ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರದೇ ಸ್ಥಳದಲ್ಲಿಯೇ ಇತ್ಯರ್ಥಗೊಂಡಿದೆ. ಇಂತಹ ಪ್ರಕರಣಗಳಲ್ಲಿ ಗಾಯಗೊಂಡು ನೋವುಂಡವರ ಮತ್ತು ಜಖಂ ಆದ ವಾಹನಗಳ ನಿಖರ ಮಾಹಿತಿ ಲಭಿಸುತ್ತಿಲ್ಲ.

೧೧ ಜನರ ಸಾವು: ೨೦೨೫ರ ಪ್ರಾರಂಭದಲ್ಲಿ ಸಂತೆಗೆ ವ್ಯಾಪಾರಕ್ಕೆಂದು ತೆರಳುತ್ತಿದ್ದ ತರಕಾರಿ ವ್ಯಾಪಾರಸ್ಥರ ಲಾರಿ ಅಪಘಾತ ಅತಿ ಭೀಕರವಾದದ್ದು. ಈ ಅಪಘಾತದಲ್ಲಿ ೧೧ ಜನ ಅಸು ನೀಗಿದ್ದರು. ಒಂದೇ ಅಪಘಾತದಲ್ಲಿ ಇಷ್ಟೊಂದು ಸಾವು ಸಂಭವಿಸಿದ್ದು ತಾಲೂಕಿನ ಇತಿಹಾಸದಲ್ಲಿಯೇ ಪ್ರಥಮವೆನಿಸಿದೆ.

ಇತ್ತೀಚೆಗೆ ಹೆದ್ದಾರಿ ಬದಿಯಲ್ಲಿ ಬಲವಾದ ಸಿಮೆಂಟ್ ತಡೆಗೋಡೆ ನಿರ್ಮಾಣ ನಡೆಯುತ್ತಿದ್ದು, ಸೈನ್ ಬೋರ್ಡ್‌ ಅಳವಡಿಸಲಾಗುತ್ತಿದೆ. ಹೆದ್ದಾರಿ ಅಂಚಿನಲ್ಲಿ ಗುಡ್ಡದಿಂದ ಹರಿದು ಬರುವ ನೀರು ರಸ್ತೆಗೆ ಸೇರಿದಂತೆ ಗಟಾರ ವ್ಯವಸ್ಥೆ ಸರಿಪಡಿಸಲಾಗುತ್ತಿದ್ದು, ರಸ್ತೆ ಕೆಡದಂತೆ ಗಮನ ಹರಿಸಲಾಗುತ್ತಿದೆ. ಹೆದ್ದಾರಿಯಂಚಿನ ಮಣ್ಣನ್ನು ಸರಿಪಡಿಸಲಾಗುತ್ತಿದೆ. ಅಪಾಯದಲ್ಲಿರುವ ಬೃಹತ್ ಗಾತ್ರದ ಮರಗಳ ತೆರವಿಗೆ ಅರಣ್ಯ ಇಲಾಖೆ ಖುದ್ದು ಗಮನಹರಿಸಿ, ಕಾರ್ಯ ಪ್ರವೃತ್ತರಾಗಬೇಕಿದೆ.

ತಾಲೂಕಿನ ಕಿರವತ್ತಿಯಲ್ಲಿಯೂ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಸುರಕ್ಷತಾ ಕಾರಣಗಳಿಗಾಗಿ ಗೂಡಂಗಡಿ ತೆರವು ಮಾಡುವ ಪ್ರಕ್ರಿಯೆ ನಡೆದಿತ್ತು. ಅಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಂತಹ ಪ್ರದೇಶದಲ್ಲಿ ಅವಧಿ ಮೀರಿ ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ರಸ್ತೆಯ ಅನೇಕ ಕಡೆ ಅಳವಡಿಸಲಾದ ಹಂಪ್‌ಗಳಿಗೆ ಬಣ್ಣ ಬಳಿಯದಿರುವುದು ಕೂಡಾ ಕೆಲವೊಮ್ಮೆ ಅಪಘಾತಗಳಿಗೆ ಕಾರಣವಾಗುತ್ತಿದೆ.

ಹೆದ್ದಾರಿ ನಿರ್ವಹಣೆ ಅಧಿಕಾರಿಯಾಗಿ ಇತ್ತೀಚೆಗೆ ಜವಾಬ್ದಾರಿ ಪಡೆದಿದ್ದು, ಹಳೆಯ ನ್ಯೂನತೆ ಸಂಬಂಧಿಸಿದ ಇಲಾಖೆ, ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳು, ವಾಹನ ಸವಾರರಿಂದ ಹಾಗೂ ತಜ್ಞರಿಂದ ಸಲಹೆ ಪಡೆದು ಸರಿಪಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ದುರಸ್ತಿ ಕಾರ್ಯಗಳು ನಡೆಯುತ್ತಿದೆ ಎಂದು ಎಇಇ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಇಲಾಖೆ ಅಧಿಕಾರಿ ಸತೀಶ್ ದಿಸ್ಲೆ ಹೇಳಿದರು.

ಹೆದ್ದಾರಿಯು ಅಧಿಕ ಕಡಿದಾದ ತಿರುವು ಹೊಂದಿದ್ದು, ಚಾಲಕರು ಜಾಗ್ರತೆಯಿಂದ ಚಾಲನೆ ಮಾಡಬೇಕು. ಅಪಘಾತಗಳಿಗೆ ವಿವಿಧ ಕಾರಣಗಳಿದ್ದರೂ ಜಾಗ್ರತೆ, ನಿಯಮಪಾಲನೆ, ಸುರಕ್ಷಿತ ಚಾಲನೆಗಳಿಂದ ಅಪಘಾತ ತಪ್ಪಿಸಬಹುದಾಗಿದೆ. ನಿದ್ದೆ ಮಂಪರಿನಲ್ಲಿ ಅಥವಾ ಕುಡಿದ ಮತ್ತಿನಲ್ಲಿ ಚಾಲನೆಯಿಂದ ಅರಬೈಲ್ ಘಟ್ಟದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಮನೆಯಲ್ಲಿ ನಿಮಗಾಗಿ ಕುಟುಂಬ ಕಾಯುತ್ತಿರುತ್ತದೆ ಎಂಬ ಭಯವಿರಲಿ ಎಂದು ಯಲ್ಲಾಪುರ ಸಂಚಾರಿ ವಿಭಾಗದ ಪಿಎಸ್‌ಐ ಸಿದ್ದು ಗುಡಿ ಹೇಳಿದರು.