ಅಧಿಕಾರಿಗಳು ಮನೆ ನೆಲಸಮ ಮಾಡಿ ಅನ್ಯಾಯ ಎಸಗಿದ್ದು, ತಮಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಿರತರಾಗಿರುವ ಕಡಬ ತಾಲೂಕಿನ ಕಾಪಿನಬಾಗಿಲು ನಿವಾಸಿ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿಯನ್ನು ಭಾನುವಾರ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿಯಾಗಿ ಆರೋಗ್ಯ ವಿಚಾರಿಸಿದರು ಹಾಗೂ ಅವರಿಂದ ಮಾಹಿತಿ ಪಡೆದುಕೊಂಡರು.
ಪುತ್ತೂರು: ಅಧಿಕಾರಿಗಳು ಮನೆ ನೆಲಸಮ ಮಾಡಿ ಅನ್ಯಾಯ ಎಸಗಿದ್ದು, ತಮಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಿರತರಾಗಿರುವ ಕಡಬ ತಾಲೂಕಿನ ಕಾಪಿನಬಾಗಿಲು ನಿವಾಸಿ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿಯನ್ನು ಭಾನುವಾರ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿಯಾಗಿ ಆರೋಗ್ಯ ವಿಚಾರಿಸಿದರು ಹಾಗೂ ಅವರಿಂದ ಮಾಹಿತಿ ಪಡೆದುಕೊಂಡರು.ರಾಧಮ್ಮ ಮತ್ತು ಮುತ್ತು ಸ್ವಾಮಿ ಹಾಗು ಮಕ್ಕಳು ಧರಣಿ ಕೈಗೊಂಡು ೭ ದಿನಗಳಾಗಿದೆ. ಆರಂಭದ ದಿನದಿಂದ ಇವತ್ತಿನ ತನಕ ಒಂದೇ ಬಟ್ಟೆಯಲ್ಲಿದ್ದು, ಸ್ನಾನವನ್ನೂ ಮಾಡಿಲ್ಲ. ನ್ಯಾಯ ಸಿಗುವ ತನಕ ಇಲ್ಲಿಂದ ಕದಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರಾತ್ರಿಯೂ ಮರದ ಬುಡದಲ್ಲೇ ವಿಶ್ರಮಿಸಿದ್ದಾರೆ. ವೃದ್ಧ ದಂಪತಿ ನ್ಯಾಯಕ್ಕಾಗಿ ನಡೆಸುತ್ತಿರುವ ಧರಣಿ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.
ದಲಿತ ಸಂಘಟನೆಗಳ ಮುಖಂಡರು ಧರಣಿ ನಿರತರನ್ನು ಭೇಟಿ ಮಾಡಿ ನ್ಯಾಯಕ್ಕೆ ಆಗ್ರಹಿಸಿದ್ದರು. ಅಲ್ಲದೆ ಮಾಜಿ ಶಾಸಕರು ಸೇರಿದಂತೆ ಬಿಜೆಪಿ ಮುಖಂಡರು ಧರಣಿ ಸ್ಥಳಕ್ಕೆ ಆಗಮಿಸಿ ಹಿರಿಯ ಜೀವಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು. ಇದೀಗ ಪುತ್ತೂರು ಅಶೋಕ್ ಕುಮಾರ್ ರೈ ಅವರು ಭೇಟಿ ನೀಡಿ ಧರಣಿ ನಿರತರ ಆರೋಗ್ಯ ವಿಚಾರಿಸಿದರು. ಬಳಿಕ ಮಾದ್ಯಮದೊಂದಿಗೆ ಮಾತನಾಡಿ, ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ ಎಂದು ನನಗೆ ಮಾಹಿತಿ ಬಂದಿತ್ತು. ಆದ ಕಾರಣ ನಾನು ಭೇಟಿ ನೀಡಿರಲಿಲ್ಲ. ದಂಪತಿ ನಾಳೆಯಿಂದ ಉಪವಾಸ ಧರಣಿ ಮಾಡುತ್ತೇವೆ ಎಂದಿದ್ದಾರೆ. ಅವರ ನೋವು ಕೇಳಿದ್ದೇನೆ. ತಮ್ಮ ವಾಸದ ಸ್ಥಳವನ್ನು ಅಧಿಕಾರಿಗಳು ಕೋರ್ಟು ಆದೇಶವಿದೆ ಎಯೆಂದು ನೆಲಸಮ ಮಾಡಿದ್ದಾರೆ ಎಂದಿದ್ದಾರೆ. ಕೋರ್ಟು ಆದೇಶದ ಜಾಗ ಇನ್ನೊಂದು ಹೆಸರಿನಲ್ಲಿದೆ ಎಂದು ಅವರು ಹೇಳುತ್ತಿದ್ದಾರೆ. ಅವರು ನೀಡಿರುವ ಅರ್ಜಿಯನ್ನು ತಿರಸ್ಕೃತ ಮಾಡಿದ್ದಾರೆ. ಜಾಗದ ಹಕ್ಕುಪತ್ರಕ್ಕಾಗಿ ೨೦ ವರ್ಷಗಳಿಂದ ಅಲೆದಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.ನಮ್ಮ ವಿಧಾನಸಭಾ ಕ್ಷೇತ್ರದ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ಮಾಡುತ್ತಿರುವುದರಿಂದ ಸ್ಪಂದಿಸಿದ್ದೇನೆ. ಅಧಿಕಾರಿಗಳಿಗೆ ಕರೆ ಮಾಡಿದ್ದೇನೆ. ಕರೆ ಸ್ವೀಕಾರ ಮಾಡುತ್ತಿಲ್ಲ. ನಾಳೆ ಸೋಮವಾರ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು, ೯೪ ಸಿ ಅಡಿಯಲ್ಲಿ ಅವರು ವಾಸಿಸುವ ಅಡಿಸ್ಥಳ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. ಮನೆ ಕಟ್ಟಲೂ ಸರಕಾರದಿಂದ ವ್ಯವಸ್ಥೆ ಮಾಡುತ್ತೇವೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇವೆ. ವೃದ್ಧ ದಂಪತಿಗೆ ನ್ಯಾಯ ಸಿಗುವಂತೆ ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರ ಮಾಡುತ್ತೇವೆ. ಉಪವಾಸ ಹಿಂತೆಗೆಯುವಂತೆ ಹೇಳಿದ್ದೇವೆ. ನಾಳೆ ತನಕ ಕಾಯುತ್ತೇವೆ ಎಂದು ಅವರು ಹೇಳಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.