ಗದಗದಲ್ಲಿ ಮನೆಗಳ್ಳತನ ಪ್ರಕರಣ, 3 ಅಂತರಾಜ್ಯ ಕಳ್ಳರ ಬಂಧನ

| Published : Jun 21 2024, 01:07 AM IST

ಗದಗದಲ್ಲಿ ಮನೆಗಳ್ಳತನ ಪ್ರಕರಣ, 3 ಅಂತರಾಜ್ಯ ಕಳ್ಳರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದಲ್ಲಿ ಮೇ 23ರಂದು ನಡೆದಿದ್ದ ಮನೆಗಳ್ಳತನ ಪ್ರಕರಣ ಪತ್ತೆ ಮಾಡುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ ₹20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗದಗ: ಗದಗ ನಗರದಲ್ಲಿ ಮೇ 23ರಂದು ನಡೆದಿದ್ದ ಶೇಖರಗೌಡ ಪಾಟೀಲ ಎನ್ನುವವರ ಮನೆಗಳ್ಳತನ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ ₹20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗದಗ ಎಸ್ಪಿ ಬಿ.ಎಸ್. ನೇಮಗೌಡ್ರ ಹೇಳಿದರು.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಬೆಳಗಾವಿ ಜಿಲ್ಲೆಯ ವೈಭವ ನಗರದ ನಿವಾಸಿಗಳಾದ ಕಾಕ ಶೇಖ ರಫೀಕ್ ಸೈಯದ (34), ಕಾರು ಚಾಲಕ, ಕೂಲಿ ಕೆಲಸ ಮಾಡುವ ಅರಮಾನ್ ಇರ್ಫಾನ್ ಶೇಖ (19), ಮೆಹಬೂಬ ಇಬ್ರಾಹಿಂ ಮುಲ್ಲಾ (18). ಬಂಧಿತ ಆರೋಪಿಗಳು.

ಬೆಳಗಾವಿ, ಹೊಸಪೇಟೆ, ಬಳ್ಳಾರಿ, ಗುಂತಕಲ್ಲನಲ್ಲಿಯೂ ವಿವಿಧ ರೀತಿಯ ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವುದು ತನಿಖೆಯ ವೇಳೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳಿಂದ ಕಳ್ಳತನವಾಗಿದ್ದ ₹20 ಲಕ್ಷ ಮೌಲ್ಯದ 401 ಗ್ರಾಂ ಬಂಗಾರ, ₹2.80 ಲಕ್ಷ ಮೌಲ್ಯದ 2 ಕೆಜಿ ಬೆಳ್ಳಿ, ವಿವಿಧ ಅಪರಾಧ ಕೃತ್ಯಗಳಿಗೆ ಬಳಸುತ್ತಿದ್ದ ₹1.50 ಲಕ್ಷ ಮೌಲ್ಯದ ಕಾರು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ ತನಿಖೆ ನಡೆಸಿ ಗದಗ ಶಹರ ಠಾಣೆಯ ಸಿಬ್ಬಂದಿಗೆ ನಗದು ಬಹುಮಾನ ನೀಡಲಾಗಿದೆ ಎಂದರು.

883 ಮೊಬೈಲ್ ಪತ್ತೆ: ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರಾರಂಭಿಸಲಾಗಿರುವ ಸಿಇಐಆರ್ ಪೋರ್ಟಲ್‌ನಲ್ಲಿ ಮೊಬೈಲ್ ಕಳೆದುಕೊಂಡವರಿಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಇದುವರೆಗೂ ಗದಗ ಜಿಲ್ಲೆಯಲ್ಲಿ 2992 ಜನ ದೂರು ದಾಖಲಿಸಿದ್ದಾರೆ. ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳು ಸೇರಿದಂತೆ ಒಟ್ಟು ₹1.32 ಕೋಟಿ ಬೆಲೆಬಾಳುವ 883 ಮೊಬೈಲ್‌ಗಳನ್ನು ಪತ್ತೆ ಮಾಡಿ ಮರಳಿ ಮಾಲೀಕರಿಗೆ ವಿತರಿಸಲಾಗಿದೆ ಎಂದ ಅವರು, ಮೊಬೈಲ್ ಕಳೆದುಕೊಂಡಿದ್ದ 158 ಜನರಿಗೆ ಗುರುವಾರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.