ಮಳೆಗೆ ಧರಾಶಾಹಿಯಾದ ಜನತಾ ಕಾಲೊನಿಯ ಮನೆಗೆ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರ ಹಾಗೂ ವೈಯಕ್ತಿಕ ಸಹಾಯಹಸ್ತ ನೀಡುವ ಭರವಸೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮಳೆಗೆ ಧರಾಶಾಹಿಯಾದ ಜನತಾ ಕಾಲೊನಿಯ ಮನೆಗೆ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರ ಹಾಗೂ ವೈಯಕ್ತಿಕ ಸಹಾಯಹಸ್ತ ನೀಡುವ ಭರವಸೆ ವ್ಯಕ್ತಪಡಿಸಿದರು.

ಕಳೆದ ಭಾನುವಾರ ಭಾರಿ ಗಾಳಿ ಮಳೆಗೆ ಧರಾಶಾಯಿಯಾಗಿದ್ದ ಜನತಾ ಕಾಲೊನಿ ನಿವಾಸಿ ಎಲಿಜಬೆತ್ ಎಂಬವರ ಮನೆಗೆ ಶುಕ್ರವಾರ ರಾತ್ರಿ ಶಾಸಕ ಡಾ. ಮಂತರ್‌ ಗೌಡ ಭೇಟಿ ನೀಡಿ, ಮನೆ ಪರಿಶಿಲಿಸಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಸರ್ಕಾರದಿಂದ ದೊರೆಯುವ ಸಲವತ್ತುಗಳನ್ನು ಶೀಘ್ರ ಒದಗಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ನನ್ನ ವೈಯಕ್ತಿಕ ಸಹಾಯಹಸ್ತವನ್ನು ನೀಡುವ ಮೂಲಕ ಸೂರು ಪುನರ್ ನಿರ್ಮಾಣಕ್ಕೆ ಮುಂದಾಗುವುದಾಗಿ ಅವರು ಹೇಳಿದರು.

ಈ ಕುಟುಂಬವು ತುಂಬಾ ಅಪಾಯದಲ್ಲಿರುವ ಮನೆಯ್ಲೇ ವಾಸಿಸುತ್ತಿರುವುದನ್ನು ಗಮನಿಸಿದ ಶಾಸಕರು ಮನೆ ತೆರವುಗೊಳಿಸಿ ಬಾಡಿಗೆ ಮನೆಯಲ್ಲಿ ನೆಲೆಸುವಂತೆ ಸೂಚಿಸಿದರಲ್ಲದೆ. ಅವರಿಗೆ ಬೇಕಾದ ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದರು. ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಪರಿವೀಕ್ಷಕ ಪ್ರಶಾಂತ್ ಅವರಿಗೆ ಸೂಚಿಸಿದರು.

ಗ್ರಾ.ಪಂ. ವತಿಯಿಂದ ಸಂತ್ರಸ್ತರಿಗೆ ಬೇಕಾದ ಸೂಕ್ತ ಸೌಲಭ್ಯವನ್ನು ಒದಗಿಸುವಂತೆ ಶಾಸಕರು ಸೂಚಿಸಿದರು. ಜನತಾ ಕಾಲೊನಿಯಲ್ಲಿ ನೆಲೆಸಿರುವ ನಿವಾಸಿಗಳು ವಾಸದ ಮನೆಯವರು ಸುತ್ತ ಮುತ್ತಲಿನ ಕೆಲವು ಮನೆಯ ಆವರಣಗೋಡೆ ಅಪಾಯದ ಅಂಚಿನಲ್ಲಿದ್ದು, ಕಾಲೊನಿ ತಗ್ಗು ಪ್ರದೇಶದಲ್ಲಿದ್ದು, ಮಳೆ ಅಧಿಕವಾಗಿ ಸುರಿದರೆ ೨ ಭಾಗಗಳಿಂದ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ರಸ್ತೆ, ಚರಂಡಿ ವ್ಯವಸ್ಥೆಗಳು ಇಲ್ಲದ ಕಾರಣ ನಾವು ಮಳೆಗಾಲದಲ್ಲಿ ಸಂಕಷ್ಟ ಎದುರಿಸುವಂತಾಗಿದೆ. ರಸ್ತೆ ಚರಂಡಿ ಸೇರಿದಂತೆ ಸಾಕಷ್ಟು ಅವ್ಯವಸ್ಥೆಗಳು ಈ ಕಾಲೊನಿಯಲ್ಲಿದ್ದು, ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಕಾಲೊನಿ ನಿವಾಸಿಗಳು ಮನವಿ ಮಾಡಿಕೊಂಡರು.

ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್‌ಖಾನ್, ಗ್ರಾಪಂ ಮಾಜಿ ಅಧ್ಯಕ್ಷರಾದ ಪಿ.ಎಫ್. ಸಬಾಸ್ಟೀನ್, ಶಿವಮ್ಮ ಮಹೇಶ್, ಮಾಜಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಮಣಿ ಹಾಗೂ ಕಾಲೊನಿ ನಿವಾಸಿಗಳು ಇದ್ದರು.