ಧರ್ಮಸ್ಥಳ ಸಂಸ್ಥೆಯಿಂದ ₹೧.೫೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ನಿರ್ಗತಿಕ ಮಹಿಳೆ ಕನಕಗಿರಿ ತಾಲೂಕಿನ ಕಲಿಕೇರಿ ಗ್ರಾಮದ ಹಿರೇದುರುಗವ್ವ ಅವರಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.

ಕನಕಗಿರಿ: ಧರ್ಮಸ್ಥಳ ಸಂಸ್ಥೆಯಿಂದ ₹೧.೫೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ನಿರ್ಗತಿಕ ಮಹಿಳೆ ತಾಲೂಕಿನ ಕಲಿಕೇರಿ ಗ್ರಾಮದ ಹಿರೇದುರುಗವ್ವ ಅವರಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.

ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ಮಾತನಾಡಿ, ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರೂ ನೆಮ್ಮದಿ ಜೀವನ ನಡೆಸಬೇಕು ಎನ್ನುವ ಕನಸನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ, ವೃದ್ಧರ, ನಿರ್ಗತಿಕರ, ಮಹಿಳೆಯರ ಏಳ್ಗೆಗೆಗೆ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಪುಣ್ಯದ ಕೆಲಸ ಮಾಡುತ್ತಿರುವ ನಮ್ಮ ಸಂಸ್ಥೆ ಸಮಾಜಮುಖಿಯಾಗಿದೆ. ಅಲ್ಲದೇ ರಾಜ್ಯದ ಸಾವಿರಾರು ನಿರ್ಗತಿಕರಿಗೆ ಸಂಸ್ಥೆ ಮನೆ ನಿರ್ಮಿಸಿ ಕೊಟ್ಟಿದ್ದು, ಇವರು ಸಹ ನೆಮ್ಮದಿಯಿಂದ ಬದುಕಲಿ ಎನ್ನುವ ಉದ್ದೇಶ ಹೊಂದಿ ಈ ಸತ್ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.

ತಾಲೂಕು ಯೋಜನಾಧಿಕಾರಿ ನಿಂಗಪ್ಪ ಅಗಸರ ಮಾತನಾಡಿ, ಹಿರೇ ದುರುಗವ್ವನ ಪರಿಸ್ಥಿತಿಯನ್ನು ವಾಸ್ತವದಲ್ಲಿ ಯೋಚಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆ ನಿರ್ಮಿಸಿ ಕೊಡಲಾಗಿದೆ. ಇವರು ನಿರ್ಗತಿಕರಾದ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಮಾಸಾಶನವೂ ನೀಡಲಾಗಿದ್ದು, ಅಂಥವರಿಗೆ ಶಕ್ತಿ ತುಂಬುವ ಜತೆಗೆ ಸಮಾಜ ಸೇವೆ ಮಾಡುತ್ತಿರುವ ಹೆಗ್ಗಡೆ ಅವರ ಕಾರ್ಯವನ್ನು ಸ್ಮರಿಸಿದರು.

ಈ ವೇಳೆ ವಲಯ ಮೇಲ್ವಿಚಾರಕ ಸಂತೋಷ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಂಜುಳಾ ಡಿ.ಎಚ್., ಸೇವಾ ಪ್ರತಿ ನಿಧಿ ರೂಬಿಯಾ ಎಲಿಗಾರ, ಗ್ರಾಮದ ಯುವ ಮುಖಂಡ ದೊಡ್ಡಬಸವ ಇದ್ದರು.

ಧನ್ಯವಾದ: ಈ ಮೊದಲು ಹಿರೇ ದುರುಗವ್ವ ತಾಡಪಾಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಳು. ಸ್ನಾನ, ಶೌಚಗೃಹ ಇಲ್ಲದೆ ಬಯಲನ್ನೆ ಅವಲಂಬಿಸಿಕೊಂಡಿದ್ದಳು. ಇದನ್ನು ಕಂಡ ಧರ್ಮಸ್ಥಳ ಸಂಸ್ಥೆಯವರು ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಈ ಕಾರ್ಯಕ್ಕೆ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದ್ದಾರೆ ಎಂದು ಗ್ರಾಮದ ಮುಖಂಡ ಹನುಮೇಶ ಗಂಟಿಗಿ ಹೇಳಿದರು.