ಸಾರಾಂಶ
ಸೋಮವಾರಪೇಟೆ ತಾಲೂಕು ಕೇಂದ್ರ ಸೇರಿದಂತೆ, ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯಲ್ಲಿ ಸ್ಥಳೀಯ ಕೆಲವರು ಹೊರರಾಜ್ಯದಿಂದ ಬಂದ ಕಾರ್ಮಿಕರಿಗೆ ಯಾವುದೇ ದಾಖಲಾತಿಗಳನ್ನು ಪಡೆದುಕೊಳ್ಳದೆ ಮನೆಗಳನ್ನು ಬಾಡಿಗೆಗೆ ನೀಡುತ್ತಿದ್ದು, ಇದರ ಬಗ್ಗೆ ತನಿಖೆ ಮಾಡಬೇಕೆಂದು ಹಿಂದೂ ಸುರಕ್ಷಾ ಸಮಿತಿ ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕು ಕೇಂದ್ರ ಸೇರಿದಂತೆ, ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯಲ್ಲಿ ಸ್ಥಳೀಯ ಕೆಲವರು ಹೊರರಾಜ್ಯದಿಂದ ಬಂದ ಕಾರ್ಮಿಕರಿಗೆ ಯಾವುದೇ ದಾಖಲಾತಿಗಳನ್ನು ಪಡೆದುಕೊಳ್ಳದೆ ಮನೆಗಳನ್ನು ಬಾಡಿಗೆಗೆ ನೀಡುತ್ತಿದ್ದು, ಇದರ ಬಗ್ಗೆ ತನಿಖೆ ಮಾಡಬೇಕೆಂದು ಹಿಂದೂ ಸುರಕ್ಷಾ ಸಮಿತಿ ಆಗ್ರಹಿಸಿದೆ.ಈ ಕುರಿತು ತಹಸೀಲ್ದಾರ್ ಅವರಿಗೆ ಬುಧವಾರ ಮನವಿ ನೀಡಿರುವ ಅವರು, ಈಗಾಗಲೇ ಜಿಲ್ಲೆಯಲ್ಲಿ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಸೋಮವಾರಪೇಟೆ ಪಟ್ಟಣ, ಶನಿವಾರಸಂತೆ ಪಟ್ಟಣ, ಕೊಡ್ಲಿಪೇಟೆ ಪಟ್ಟಣ ಹಾಗೂ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಯಾವುದೇ ಪೂರ್ವಾಪರ ವಿಚಾರಿಸದೆ ದಾಖಲಾತಿ ಪಡೆದುಕೊಳ್ಳದೇ ಮನೆ ಮಾಲೀಕರು ಮನೆಗಳನ್ನು ನೀಡಿದ್ದಾರೆ. ದೊಡ್ಡಕೊಡ್ಲಿ ಗ್ರಾಮದ ಸರ್ಕಾರಿ ಪೈಸಾರಿ ಜಾಗದಲ್ಲಿ ಅವರು ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ಮುಂದೆ ಏನಾದರೂ ಅನಾಹುತ ನಡೆದರೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರು ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ಪಿ. ಮಧು, ಉಮೇಶ್, ಜೀವನ್, ರಕ್ಷಿತ್, ನಾಗೇಶ್, ಟಿ.ಕೆ. ರಮೇಶ್ ಮತ್ತಿತರರು ಇದ್ದರು.