ಕನ್ನಡಪ್ರಭ ವಾರ್ತೆ ಹುಣಸೂರು

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಗರದ ವಿವಿಧ ವಾರ್ಡ್‌ಗಳ 206 ಕೊಳಗೇರಿ ನಿವಾಸಿಗಳಿಗೆ ಕೊಡಮಾಡಿದ ಮನೆಯ ಹಕ್ಕು ಪತ್ರವನ್ನು ಶಾಸಕ ಜಿ.ಡಿ.ಹರೀಶ್‌ ಗೌಡ ವಿತರಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯು ಆಯೋಜಿಸಿದ್ದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಕ್ಕುಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಹಲವಾರು ವರ್ಷಗಳಿಂದ ತಾವು ವಾಸಿಸುತ್ತಿರುವ ಸ್ಥಳಗಳಿಗೆ ಹಕ್ಕುಪತ್ರ ಸಿಗದೇ ಬಡ ಜನರು ಬೇಸತ್ತಿದ್ದರು. ಬಹುತೇಕ ಮಂದಿ ಬಡವರೇ ಇದ್ದಾರೆ. ಇದೀಗ ನಿಮಗೆ ಮಾಲೀಕತ್ವದ ಹಕ್ಕುಪತ್ರ ದೊರೆತಿದೆ. ಇನ್ನು ಹಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಈ ಸಂಬಂಧ ಸರ್ವೆ ನಡೆಸಿಲ್ಲ ಎಂಬ ನಗರಸಭೆಯ ಮಾಜಿ ಸದಸ್ಯರು ಮಾಹಿತಿ ನೀಡಿದ್ದಾರೆ. ಉಳಿದ ಕೊಳಗೇರಿ ಬಡಾವಣೆಗಳಲ್ಲಿ ಸರ್ವೆ ನಡೆಸಿ ಹಕ್ಕುಪತ್ರ ನೀಡಲು ಕ್ರಮವಹಿಸಬೇಕೆಂದು ಮಂಡಳಿ ಅಧಿಕಾರಿಗಳು ಶೀಘ್ರ ನೀಡಬೇಕು. ಹಕ್ಕುಪತ್ರವು ನಿಮ್ಮ ಆಸ್ತಿಯ ದಾಖಲೆಯಾಗಿದ್ದು, ಕಳೆದುಕೊಂಡಲ್ಲಿ ತೊಂದರೆಗೆ ಸಿಲುಕುವಿರಿ. ಕಾಪಾಡಿಕೊಳ್ಳಿ ಎಂದು ಎಚ್ಚರಿಸಿದರು.

ತಕ್ಷಣ ಖಾತೆಗೆ ಸೂಚನೆ: ಹಕ್ಕುಪತ್ರ ಪಡೆದಿರುವವರ ಖಾತೆ ಮೊದಲಿಗೆ ಮಂಡಳಿಯ ಎಇಇ ಹೆಸರಿನಲ್ಲಿ ಆಗಲಿದೆ. ನಂತರ ನಗರಸಭೆಗೆ ಹಸ್ತಾಂತರಿಸಲಾಗುವುದು. ಪ್ರತಿ ಫಲಾನುಭವಿಗಳು ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಣಿ ಮಾಡಿಸಬೇಕು. ನಂತರ ನಗರಸಭೆ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿಕೊಡಲಿದ್ದು, ಇದಕ್ಕೆ ಕೊಳಗೇರಿ ಮಂಡಳಿಯವರು 206 ಫಲಾನುಭವಿಗಳ ಖಾತೆಯನ್ನು ಒಮ್ಮೆಲೆ ನೊಂದಾಯಿಸಿಕೊಂಡು ನಗರಸಭೆಗೆ ಹಸ್ತಾಂತರಿಸಬೇಕೆಂದು ಎಇಇ ನುಸ್ರತ್‌ ಅವರಿಗೆ ಹಾಗೂ ಪೌರಾಯುಕ್ತರಿಗೂ ಶಾಸಕರು ಸೂಚಿಸಿದರು.


ಕೊಳಗೇರಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಕುಮಾರ್‌ ಈಶ್ವರ್, ಈಗಾಗಲೆ ಮಂಡಳಿಯಿಂದ 770 ಮಂದಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಈಗ ಡಿ.ಡಿ. ಮೂಲಕ ಹಣ ಪಾವತಿಸಿರುವ 206 ಮಂದಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇನ್ನೂ 100 ಮಂದಿ ನಿವಾಸಿಗಳಿರುವ ಅಂದಾಜಿದ್ದು, ಶುಲ್ಕ ಪಾವತಿಸಿದರೆ ಹಕ್ಕುಪತ್ರ ನೀಡಲಾಗುವುದೆಂದು ತಿಳಿಸಿದರು.

ಪೌರಾಯುಕ್ತೆ ಮಾನಸ, ಮಂಡಳಿ ಎಇಇ ನುಸ್ರತ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕಲ್ಕುಣಿಕೆ ರಾಘು, ನಗರಸಭೆ ಮಾಜಿ ಸದಸ್ಯರು ಹಾಗೂ ಕೊಳಗೇರಿ ನಿವಾಸಿಗಳು ಭಾಗವಹಿಸಿದ್ದರು.