ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಭಾರತದ ಜನಗಣತಿ -2027ರ ಮೊದಲನೇ ಹಂತದ ಮನೆಯ ಮನೆ ಗಣತಿ ಕಾರ್ಯ ಏ.15ರಿಂದ ಪ್ರಾರಂಭವಾಗಲಿದೆ ಎಂದು ತಹಸೀಲ್ದಾರ್ ಡಾ.ನೂರಲ್ ಹುದಾ ತಿಳಿಸಿದರು.

ತಾಲೂಕಿನಲ್ಲಿ ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ 3 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾಂತಂತ್ರ್ಯ ಬಂದ ಮೇಲೆ ಇದೇ ಪ್ರಥಮ ಬಾರಿಗೆ ಡಿಜಿಟಲ್ ಜನ ಗಣತಿ ನಡೆಸಲಾಗುತ್ತಿದೆ. ಜನಗಣತಿಯಿಂದ ನಮ್ಮ ದೇಶದ ಜನ ಸಂಖ್ಯೆ ತಿಳಿಯಲಿದೆ.ಅಲ್ಲದೆ ರಾಜ್ಯದಲ್ಲಿ, ಜಿಲ್ಲೆಯಲ್ಲಿ ಹಾಗೂ ತಾಲೂಕಿನ ಜನ ಸಂಖ್ಯೆಯು ಸಹ ನಿಖರವಾಗಿ ತಿಳಿಯಲಿದೆ.ಈ ಅಂಕಿ ಸಂಖ್ಯೆಯ ಆಧಾರದ ಮೇಲೆ ದೇಶದ ಅಭಿವೃದ್ದಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.ನಮ್ಮ ತಾಲೂಕಿನಲ್ಲಿ 111 ಬ್ಲಾಕ್ ಇದೆ. 20 ಜನರು ಮೇಲ್ವೀಚಾರಕರು ಸೇರಿ 151 ಜನರು ಸರ್ವೆ ಕಾರ್ಯದಲ್ಲಿ ಬಾಗಿಯಾಗಲಿದ್ದಾರೆ. ಜನಗಣತಿದಾರರಿಗೆ ಸಮಸ್ಯೆ ಇದ್ದರೆ ಮಾಸ್ಟರ್ ಟ್ರೈನರ್ ಹತ್ತಿರ ಸಲಹೆ ಪಡೆಯಬಹುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಮಾತನಾಡಿ, ಕಳೆದ ಸರ್ವೆಗಿಂತ ಈ ಬಾರಿ ಕೆಲವು ಬದಲಾವಣೆ ಆಗಿದೆ.ಪ್ರತಿ ಜನಗಣತಿದಾರರಿಗೆ ಆಯಾ ವ್ಯಾಪ್ತಿಯಲ್ಲೇ ಸರ್ವೆಗೆ ಹಾಕಲಾಗಿದೆ.3 ದಿನಗಳ ತರಬೇತಿ ಪಡೆದುಕೊಳ್ಳಿ. ಜನಗಣತಿದಾರರು ತಮ್ಮ ಆರೋಗ್ಯ ಕಾಪಾಡಿಕೊಂಡು ಕೆಲಸ ಮಾಡಬೇಕು. ಸಮಸ್ಯೆ ಇದ್ದರೆ ಸಂಪನ್ಮೂಲ ವ್ಯಕ್ತಿಗಳಿಂದ, ಕಂದಾಯ ಇಲಾಖೆಯ ಅಧಿಕಾರಿಗಳಿಂದ ಹೆಚ್ಚಿ ಮಾಹಿತಿ ಪಡೆಯಬಹುದು. ಹೆಚ್ಚು ಒತ್ತಡ ಮಾಡಿಕೊಳ್ಳಬೇಡಿ ಎಂದು ಕರೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ಜನಗಣತಿ ಅತ್ಯಂತ ಮಹತ್ವದ ಕಾರ್ಯವಾಗಿದೆ. ಜನಗಣತಿಯಿಂದ ದೇಶದ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ. ದೇಶದ ಆರ್ಥಿಕತೆ, ಸಾಮಾಜಿಕ ವಿಚಾರಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶವಾಗಿದೆ.ಈಗ ತಂತ್ರಜ್ಞಾನ ಮುಂದುವರಿದಿದ್ದು ಜನಗಣತಿಗೆ ಸುಲಭವಾಗಲಿದೆ. 2011 ರಲ್ಲಿ ಜನಗಣತಿ ನಡೆದಿತ್ತು. 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿ ಕೋವಿಡ್ ಕಾರಣದಿಂದ ನಡೆದಿರಲಿಲ್ಲ ಎಂದರು.


ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್ .ವಿ.ಮಂಜುನಾಥ್ ಇದ್ದರು. ನಂತರ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು. 3 ದಿನಗಳಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರು ಸೇರಿ 151 ಜನರು ತರಬೇತಿ ಪಡೆಯಲಿದ್ದಾರೆ.