ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಭೆ ಜರುಗಿತು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಹಾಗೂ ಕಂಪ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿ ಕೆ.ಆರ್.ದೇವರಾಜ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರಗೊಳಿಸುವ ಉದ್ದೇಶದಿಂದ ವಿಶೇಷ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿದೆ. 2002ರ ಮತದಾರರ ಪಟ್ಟಿಯಲ್ಲಿದ್ದ ಮತದಾರರ ಮಾಹಿತಿಯನ್ನು 2025ರ ಮತದಾರರ ಪಟ್ಟಿಯೊಂದಿಗೆ ಜೋಡಣೆ ಮಾಡಲಾಗಿದ್ದು, ಇದುವರೆಗೆ ಶೇ.97ರಷ್ಟು ಮಾಹಿತಿ ಹೊಂದಾಣಿಕೆಯಾಗಿದೆ. ಉಳಿದ ಮಾಹಿತಿಯನ್ನು ದೃಢೀಕರಿಸಲು ಮನೆಮನೆಗೆ ಭೇಟಿ ನೀಡಿ ಗಣತಿ ಕಾರ್ಯ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಬಿಎಲ್‌ಒಗಳು (ಬೂತ್ ಮಟ್ಟದ ಅಧಿಕಾರಿಗಳು) ಮತದಾರರಿಗೆ ಎನ್ಯೂಮರೇಷನ್ ಫಾರ್ಮ್ (ಗಣತಿ ನಮೂನೆ) ವಿತರಿಸಲಿದ್ದು, ಮತದಾರರು ಅಗತ್ಯ ದಾಖಲೆಗಳೊಂದಿಗೆ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಹಿಂತಿರುಗಿಸಬೇಕು ಎಂದು ತಿಳಿಸಿದರು.

ಅಪೂರ್ಣ ಮಾಹಿತಿ ಅಥವಾ ತಪ್ಪು ವಿವರಗಳನ್ನು ನೀಡಿದಲ್ಲಿ ಮತದಾರರ ಹೆಸರು ಅಂತಿಮ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ನಮೂನೆ ಭರ್ತಿ ಮಾಡಬೇಕು ಎಂದು ಎಚ್ಚರಿಸಿದರು.

ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆಮನೆಗೆ ತೆರಳಿ ಗಣತಿ ಕಾರ್ಯ ನಡೆಸಲಿದ್ದಾರೆ. ಈ ಅವಧಿಯಲ್ಲಿ ಮತದಾರರು ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿ ಸಹಕರಿಸಬೇಕು. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಜೂಗಲ ಮಂಜುನಾಯಕ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಮನೆಗಳಿಗೆ ಭೇಟಿ ನೀಡುವ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.


ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 242 ಮತಗಟ್ಟೆಗಳಿದ್ದು, ಅವುಗಳಲ್ಲಿ ಕಂಪ್ಲಿ ತಾಲೂಕಿನ 107, ಕುರುಗೋಡು ತಾಲೂಕಿನ 95 ಹಾಗೂ ಬಳ್ಳಾರಿ ತಾಲೂಕಿನ 40 ಮತಗಟ್ಟೆಗಳು ಸೇರಿವೆ. ಕ್ಷೇತ್ರದಲ್ಲಿ ಒಟ್ಟು 2,28,745 ಮತದಾರರಿದ್ದು, ಇವರಲ್ಲಿ 1,12,367 ಪುರುಷರು, 1,16,340 ಮಹಿಳೆಯರು ಹಾಗೂ 38 ತೃತೀಯ ಲಿಂಗಿ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ 242 ಬಿಎಲ್‌ಒಗಳನ್ನು ನಿಯೋಜಿಸಲಾಗಿದ್ದು, ಇವರಲ್ಲಿ 43 ಆಶಾ ಕಾರ್ಯಕರ್ತೆಯರು, 184 ಅಂಗನವಾಡಿ ಕಾರ್ಯಕರ್ತೆಯರು, 12 ಶಿಕ್ಷಕರು ಹಾಗೂ 3 ಕರವಸೂಲಿಗಾರರು ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಸಭೆಯಲ್ಲಿ ಬಿಎಲ್‌ಎ-1 ಗೊರ್ತಿ ಶ್ರೀನಿವಾಸ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಶ್ರೀನಿವಾಸರಾವ್, ಸೈಯ್ಯದ್ ಉಸ್ಮಾನ್, ಬಿ.ಅಂಬಣ್ಣ, ಅಯ್ಯೋದಿ ವೆಂಕಟೇಶ್, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳು, ಪುರಸಭೆ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.