ಮಳೆಗೆ ಕುಸಿದ ಮನೆ ಗೋಡೆ: 8 ಮಂದಿ ರಕ್ಷಣೆ

| Published : Sep 29 2025, 01:02 AM IST

ಸಾರಾಂಶ

ಸತತ ಮಳೆಗೆ ನಲುಗಿರುವ ಕಲಬುರಗಿ ನಗರದಲ್ಲಿ ಮನೆ ಗೋಡೆ ಕುಸಿದಾಗ ಮನೆಯೊಳಗೇ ಸಿಲುಕಿದ್ದ 8 ಜನರನ್ನು ಭಾನುವಾರ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಕಲಬುರಗಿ ನಗರದ ಸರಫ್ ಬಜಾರ್‌ನ ಗಣೇಶ್ ಮಂದಿರದ ಬಳಿ ಈ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸತತ ಮಳೆಗೆ ನಲುಗಿರುವ ಕಲಬುರಗಿ ನಗರದಲ್ಲಿ ಮನೆ ಗೋಡೆ ಕುಸಿದಾಗ ಮನೆಯೊಳಗೇ ಸಿಲುಕಿದ್ದ 8 ಜನರನ್ನು ಭಾನುವಾರ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಕಲಬುರಗಿ ನಗರದ ಸರಫ್ ಬಜಾರ್‌ನ ಗಣೇಶ್ ಮಂದಿರದ ಬಳಿ ಈ ಘಟನೆ ನಡೆದಿದೆ.

ಕಲಬುರಗಿ ನಗರದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆಗಳು ಶಿಥಿಲ ಗೊಂಡಿದ್ದವು.

ಹೀಗಾಗಿ ಧಾರಾಕಾರ ಮಳೆಗೆ ಶಿಥಿಲಗೊಂಡ ಹಳೆಯ ಮನೆಯ ಗೋಡೆ ಏಕಾಏಕಿ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರಾಫ್ ಬಜಾರ ನಿವಾಸಿಗಳಾದ ಮಹಾಂತಯ್ಯ ಸ್ವಾಮಿ, ಸುನಂದಾ ಸ್ವಾಮಿ, ಪಾಂಡುರಂಗ ಪಂಚಾಳ, ಸಿದ್ಧರಾಜ ಸ್ವಾಮಿ, ಸಾವಿತ್ರಿಬಾಯಿ, ಛಾಯಾ, ನಾಗೇಶ ಮತ್ತು ಬಸವರಾಜ ವಸ್ತ್ರದ ಮೊದಲಾದವರು ಮಳೆಗೆ ನೆನೆದು ಗೋಡೆ ಕುಸಿದ ಮನೆಯೊಳಗೆ ಸಿಲುಕಿದ್ದರು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇವರನ್ನು ಸುರಕ್ಷಿತ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯವರಾದ ಶಾಂತಪ್ಪ ಪಟೇದ್, ರಾಮಜಿ, ಹರೀಶ್, ಸುಭಾಷ, ಶಿವರಾಜ, ಯುಸೂಫ್, ಸಿದ್ಧಪ್ಪ ಮತ್ತು ಶಂಕರಲಿಂಗ ಸತತ ಕಾರ್ಯಾಚರಣೆ ನಡೆಸಿದ್ದಾರೆ.

ಗೋಡೆ ಕುಸಿತದಿಂದ ಮನೆಯ ಮೇಲ್ಮಹಡಿಯಲ್ಲಿದ್ದ ಕುಟುಂಬದವರು ಕೆಳಗೆ ಬರಲಾಗಿದೆ ಪರದಾಟ ನಡೆಸಿದರು. ಸ್ಥಳಿಯರಿಂದ ತಕ್ಷಣ ಈ ಘಟನೆ ಬಗ್ಗೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಕೋರಿ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸಂಪರ್ಕಿಸಿದ್ದಾರೆ.

ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳಿಂದ ರಕ್ಷಣಾ ಕಾರ್ಯ ಶುರುವಾಗಿದೆ. ಪಾಲಿಕೆ ಸಿಬ್ಬಂದಿ ಜೆಸಿಬಿ ಮೂಲಕ ಗೋಡೆ ತೆರವುಗೊಳಿಸಿ ಒಳಗೆ ಸಿಲುಕಿದ್ದ ಕುಟುಂಬಸ್ಥರನ್ನು ರಕ್ಷಿಸಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಭೇಟಿ ನೀಡಿ ರಕ್ಷಣಾ ಕಾರ್ಯದ ಸಂಪೂರ್ಣ ಉಸ್ತುವಾರಿ ವಹಿಸಿದ್ದರು.

ಅಪಾಯದಲ್ಲಿ ಸಿಲುಕಿದವರ ಎಲ್ಲರ ಯೋಗಕ್ಷೇಮ ವಿಚಾರಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್ ಸಂತ್ರಸ್ತರ ಅರೋಗ್ಯ ತಪಾಸಣೆಗೂ ವ್ಯವಸ್ಥೆ ಮಾಡಿದರು. ಮೇಯರ್ ವರ್ಷಾ ಜಾನೆ, ಪಾಲಿಕೆ ಸಿಬ್ಬಂದಿ ಇದ್ದರು.