ಸಾರಾಂಶ
ಆಶ್ರಯ ಯೋಜನೆಯಡಿ ನಿರ್ಮಾಣ । ವಸತಿ ಸಚಿವ ಜಮೀರ್ ಅಹಮ್ಮದ್ ಸಮ್ಮುಖ ಆಯ್ಕೆ ಪ್ರಕ್ರಿಯೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಇಲ್ಲಿನ ಗೋವಿಂದಾಪುರ ಗ್ರಾಮದಲ್ಲಿ 2ನೇ ಹಂತದಲ್ಲಿ ನಿರ್ಮಾಣವಾಗಿರುವ 625 ಆಶ್ರಯ ಮನೆಗಳನ್ನು ಫೆ.25ರಂದು ವಸತಿ ಸಚಿವ ಜಮೀರ್ ಅಹಮ್ಮದ್ ಅವರ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿ ಫಲಾನುಭವಿಗಳಿಗೆ ಹಂಚಲಾಗುವುದು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ತಿಳಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಗೋವಿಂದಾಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಆಶ್ರಯ ಸಮಿತಿ ತೀರ್ಮಾನದಂತೆ ತಾತ್ಕಾಲಿಕವಾಗಿ ನೀರಿನ ಸೌಲಭ್ಯ, ವಿದ್ಯುತ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಫೆ.25ರಂದು ಬೆಳಗ್ಗೆ 11ಕ್ಕೆ ಲಾಟರಿ ಮೂಲಕ ಫಲಾನುವಿಗಳನ್ನು ಆಯ್ಕೆ ಮಾಡಿ ಮನೆಯ ಕೀ ಯನ್ನು ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, 2017ರಂದು ನಮ್ಮ ಸರ್ಕಾರದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಇದು ನಮ್ಮ ಸರ್ಕಾರದ ಹೋರಾಟದ ಫಲ. ಮಾ.3 ರಂದು ಅದ್ದೂರಿಯಾಗಿ ಹಂಚುವ ಯೋಜನೆ ಇತ್ತು. ಆದರೆ ಫಲಾನುಭವಿಗಳ ಒತ್ತಡದ ಮೇರೆಗೆ ಫೆ.25 ರಂದು ಲಾಟರಿ ಮೂಲಕ 625 ಮನೆಗಳನ್ನು ಹಂಚಲಾಗುತ್ತಿದೆ. ಕಾರ್ಯಕ್ರಮಕ್ಕೆ ವಸತಿ ಸಚಿವ ಜಮೀರ್ ಅಹಮ್ಮದ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆಗಮಿಸಲಿದ್ದಾರೆ. ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಪಾಲ್ಗೊಳ್ಳಲಿದ್ದಾರೆ ಎಂದರು.
ಆಶ್ರಯ ಮನೆಗಳ ಇನ್ನುಳಿದ ವ್ಯವಸ್ಥೆಯನ್ನು ವೇಗವಾಗಿ ಮಾಡಲಾಗುವುದು. ಇದಕ್ಕೆ ಬೇಕಾದ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡುವ ಕೆಲಸ ಆಗಲಿ, ಗೋಪಿಶೆಟ್ಟಿಕೊಪ್ಪದಲ್ಲಿ ಮನೆ ನಿರ್ಮಾಣವಾಗಬೇಕು. ಮನೆ ಮಾತ್ರವಲ್ಲದೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.ಒಟ್ಟು 3000 ಆಶ್ರಯ ಮನೆ ನಿರ್ಮಿಸಬೇಕು ಎಂಬ ಯೋಚನೆ ಇತ್ತು. 2013 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 3000 ಮನೆಗಳನ್ನು ಕಟ್ಟಲು ಆದೇಶಿಸಿದ್ದರು. ಆಗ ಸುಮಾರು 600 ಮನೆ ನೀಡಲಾಗಿತ್ತು. ಆದರೆ, ಮಧ್ಯದಲ್ಲಿ ಬಂದ ಸರ್ಕಾರಗಳು ಇದರ ಬಗ್ಗೆ ಹೆಚ್ಚಿನ ಗಮನ ವಹಿಸಲಿಲ್ಲ. ಈಗ 625 ಮನೆ ನೀಡಲಾಗುತ್ತಿದೆ. ಬಸ್ಸಿನ ಸೌಲಭ್ಯ, ಆಸ್ಪತ್ರೆ ಸೌಲಭ್ಯ, ಶಾಲೆಯ ಸೌಲಭ್ಯ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದರು.
ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್ ಮಾತನಾಡಿ, ಮನೆಕಟ್ಟಿ ನೋದು ಮದುವೆ ಮಾಡಿ ನೋಡು ಎನ್ನುವಂತೆ ಜಿ+20 ಮಾದರಿಯಲ್ಲಿ ಮಾಡಲಾಗಿದೆ. ಬೊಮ್ಮನ ಕಟ್ಟೆಯಲ್ಲಿ ಸಹ ನಮ್ಮ ಸರ್ಕಾರದಿಂದ ಮನೆಗಳನ್ನು ನೀಡಿದ್ದೇವೆ. ಮತ್ತೊಮ್ಮೆ ಸಿದ್ದರಾಮಯ್ಯರವರು ಅಧಿಕಾರಕ್ಕೆ ಬಂದಾಗ ಮನೆಯನ್ನು ನೀಡುತ್ತಿದ್ದಾರೆ. ಫಲಾನುಭವಿಗಳಿಗೆ ಮನೆಯನ್ನು ಕೊಡುವ ಸುವರ್ಣ ಅವಕಾಶ ನಮಗೆ ದೊರೆತಿದೆ ಎಂದರು.ಫಲಾನುಭವಿಗಳಿಗೆ ಮಹಾನಗರ ಪಾಲಿಕೆಯಿಂದ ಬಸ್ಸಿನ ವ್ಯವಸ್ಥೆಯನ್ನು ಮಾಡಿದ್ದೇವೆ. ಮನೆಗಳ ಸಂಖ್ಯೆಯನ್ನು ಲಾಟರಿ ಮುಖಾಂತರ ಎತ್ತುವ ಉದ್ದೇಶವಿದೆ. ಫಲಾನುಭವಿಗಳ ನಡುವೆ ಫಸ್ಟ್ ಫ್ಲೋರ್ 2 ಫ್ಲೋರ್ ಮನೆ ಬೇಕೆಂಬ ಗೊಂದಲ ಸೃಷ್ಟಿಯಾಗಬಾರದೆಂದು ಲಾಟರಿ ಮೂಲಕ ಎತ್ತುವ ಉದ್ದೇಶ ಇದೆ ಎಂದರು.
3 ಕಿ.ಮೀ ಕಾಮಗಾರಿ ಮುಗಿದ ನಂತರ ನೀರಿನ ವ್ಯವಸ್ಥೆ ಆಗುತ್ತದೆ. ಫಲಾನುಭವಿಗಳು ಕುಟುಂಬ ಸಮೇತರಾಗಿ ಆಗಮಿಸಬೇಕು. ಊಟದ ವ್ಯವಸ್ಥೆಯನ್ನು ಕೂಡಾ ಮಹಾನಗರದಲ್ಲಿ ವತಿಯಿಂದ ಮಾಡಲಾಗಿದೆ. ಸರ್ಕಾರಿ ಬಸ್ಸಿನ ವ್ಯವಸ್ಥೆಗೆ ಮನವಿ ಮಾಡಲಾಗಿದೆ ಎಂದರು.ಕಲೀಮ್ ಪಾಷಾ, ಶಿವಕುಮಾರ್, ಲಕ್ಷ್ಮಣ್, ಮುಹಿ ಪಾಷಾ ಸೇರಿ ಇತರರು ಹಾಜರಿದ್ದರು.