ಚಿಕ್ಕಮಗಳೂರುಜಿಲ್ಲೆಯ ವಿವಿಧೆಡೆ ಕೈಚಳಕ ತೋರಿ ಮನೆಗಳವು ಮಾಡುತ್ತಿದ್ದ ಇಬ್ಬರು ಅಂತರ ಜಿಲ್ಲಾ ಮನೆಗಳ್ಳರನ್ನು ಬಂಧಿಸಿರುವ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ₹32.74 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು ಹಾಗೂ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

- ₹32.74 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು । ಆರೋಪಿಗಳಿಗೆ ನ್ಯಾಯಾಂಗ ಬಂಧನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯ ವಿವಿಧೆಡೆ ಕೈಚಳಕ ತೋರಿ ಮನೆಗಳವು ಮಾಡುತ್ತಿದ್ದ ಇಬ್ಬರು ಅಂತರ ಜಿಲ್ಲಾ ಮನೆಗಳ್ಳರನ್ನು ಬಂಧಿಸಿರುವ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ₹32.74 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು ಹಾಗೂ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕರ್ನಾಳ ಗ್ರಾಮದ ಗಂಗಾಧರ, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬಸವನಹಳ್ಳಿ ಗ್ರಾಮದ ಬಸವರಾಜ್ ಬಂಧಿತ ಆರೋಪಿಗಳು.

ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಗೇನಹಳ್ಳಿಯ ಪ್ರೇಮಾ ಅವರ ಮನೆಯಲ್ಲಿ ₹2 ಲಕ್ಷ ಬೆಲೆಬಾಳುವ ಚಿನ್ನಾಭರಣ ಕಳ್ಳತನ ನಡೆದಿತ್ತು. ಈ ಸಂಭಂದ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಎಸ್ ಪಿ ಜಿತೇಂದ್ರ ಕುಮಾರ್ ದಯಾಮ ಅವರು ಕಳ್ಳರ ಬಂಧನಕ್ಕಾಗಿ ರಚಿಸಿದ್ದ ವಿಶೇಷ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಿಂದ ₹22.20 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ, ಒಂದು ಸಾವಿರ ಮೌಲ್ಯದ ಬೆಳ್ಳಿ ನಾಣ್ಯ, ₹55 ಸಾವಿರ ನಗದು, ಕೃತ್ಯಕ್ಕೆ ಬಳಸಿದ ₹10 ಲಕ್ಷ ಮೌಲ್ಯದ ಕಾರು ಹಾಗೂ ಮೂರು ಸಾವಿರ ಮೌಲ್ಯದ ಹೈಡ್ರಾಲಿಕ್ ಸ್ಟೀಲ್ ಕಟರ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಬ್ಬಿಣದ ರಾಡ್ ಹಾಗೂ ಹೈಡ್ರಾಲಿಕ್ ಕಟರ್ ಬಳಸಿ ಬೀಗ ಮುರಿದು ಮನೆ ಕಳ್ಳತನ ಮಾಡಿರುವುದು ತಿಳಿದು ಬಂದಿದೆ.

ಆರೋಪಿಗಳು ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎರಡು ಮನೆಗಳತನ, ಕಡೂರು ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಲಾ ಒಂದು ಮನೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ತರೀಕೆರೆ ಡಿ ವೈ ಎಸ್ ಪಿ ಪರಶುರಾಮಪ್ಪ ಮಾರ್ಗದರ್ಶನದಲ್ಲಿ ತರೀಕೆರೆ ಸಿಪಿಐ ಗಿರೀಶ್, ಲಕ್ಕವಳ್ಳಿ ಪಿಎಸ್ಐ ವಿಶ್ವನಾಥ್, ಸಿಬ್ಬಂದಿಗಳಾದ ಧನಂಜಯ್, ಶಿವಕುಮಾರ್, ಅವಿನಾಶ್, ಪುನೀತ್, ಹೇಮಂತ್ ಕುಮಾರ್, ರಾಜಪ್ಪ, ಮಧುಕುಮಾರ್ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಫೋಟೋ:ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಅಂತರ ಜಿಲ್ಲಾ ಮನೆಗಳನ್ನು ಬಂಧಿಸಿ ವಶಕ್ಕೆ ಪಡೆದಿರುವ ಚಿನ್ನಾಭರಣ ಹಾಗೂ ನಗದು.