ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಎಚ್‌ಎಎಲ್ 2ನೇ ಹಂತದ ನಿವಾಸಿ ಪ್ರೇರಣಾ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಶುಕ್ರವಾರ ಬೆಳಗ್ಗೆ ಎಚ್‌ಎಎಲ್ 2ನೇ ಹಂತದ ದೂಪದಹಳ್ಳಿಯಲ್ಲಿರುವ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪ್ರೇರಣಾ ಸಂಬಂಧಿ ಚಂದ್ರು ಎಂಬುವರು, ಪ್ರೇರಣಾ ಪತಿ ವಿನಯ್ ಕುಮಾರ್ ಹಾಗೂ ಆತನ ಪಾಲಕರ ವಿರುದ್ಧ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೋದಲ್ಲಿ ಗುತ್ತಿಗೆ ನೌಕರನಾಗಿರುವ ವಿನಯ್ ಕುಮಾರ್ ಒಂದೂವರೆ ವರ್ಷದ ಹಿಂದಷ್ಟೇ ಪ್ರೇರಣಾ ಅವರನ್ನು ವಿವಾಹವಾಗಿದ್ದು, ಎಚ್‌ಎಎಲ್ 2ನೇ ಹಂತದಲ್ಲಿರುವ ದೂಪದಹಳ್ಳಿಯಲ್ಲಿ ವಾಸವಾಗಿದ್ದರು. ಪ್ರೇರಣಾ ಮದುವೆಯಾದ ಬಳಿಕ ಬಿಎಸ್ಸಿ ಪದವಿ ಪೂರ್ಣಗೊಳಿಸಿದ್ದಾರೆ. ಈ ಮಧ್ಯೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಅದರಿಂದ ಬೇಸರಗೊಂಡು ಪ್ರೇರಣಾ ತವರು ಮನೆಗೆ ಹೋಗಿದ್ದರು. 15 ದಿನಗಳ ಹಿಂದಷ್ಟೇ ಕುಟುಂಬಸ್ಥರು ರಾಜಿ-ಸಂಧಾನ ಮಾಡಿಸಿ ಪತಿಯ ಮನೆಗೆ ಕಳುಹಿಸಿದ್ದರು. ಈ ಮಧ್ಯೆ ಶುಕ್ರವಾರ ಬೆಳಗ್ಗೆ ಮನೆಯ ಕೋಣೆಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಕಿರುಕುಳ ತಾಳಲಾರದೆ ಪ್ರೇರಣಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಚಂದ್ರು ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಘಟನೆಗೆ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.