ವಸತಿ ರಹಿತರು, ಬಡ ಫಲಾನುಭವಿಗಳಿಗೆ ಸೂರು: ಶಾಸಕ ಆರ್.ವಿ. ದೇಶಪಾಂಡೆ

| Published : Nov 17 2024, 01:15 AM IST

ಸಾರಾಂಶ

ಯಾವುದೇ ಅರ್ಜಿದಾರರು ಹಣ, ಲಂಚ ನೀಡಿದ ಸುಳಿವು ಸಿಕ್ಕರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಶಾಸಕರು ಎಚ್ಚರಿಸಿದರು.

ಹಳಿಯಾಳ: ಆಶ್ರಯ ಫಲಾನುಭವಿಗಳ ಆಯ್ಕೆಯನ್ನು ಈ ಬಾರಿ ನಾನೇ ಖುದ್ದಾಗಿ ಮಾಡಲು ಬಯಸಿದ್ದೇನೆ. ಬಡವರು, ಅತೀ ಬಡವರು, ನಿಜವಾಗಿಯೂ ಸೂರು ರಹಿತರನ್ನು ಗುರುತಿಸಿ ಮನೆ ನೀಡಲು ಇಚ್ಛಿಸಿದ್ದೇನೆ. ಅದಕ್ಕಾಗಿ ಈ ಆಯ್ಕೆ ಪ್ರಕ್ರಿಯೆಯಲ್ಲಿ ದಯವಿಟ್ಟು ಸಮಿತಿಯ ಸದಸ್ಯರು ಹಸ್ತಕ್ಷೇಪ ಮಾಡಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಶನಿವಾರ ಪುರಸಭೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಶ್ರಯ ಫಲಾನುಭವಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಒಂದಾನು ವೇಳೆ ಯಾವುದೇ ಅರ್ಜಿದಾರರು ಹಣ, ಲಂಚ ನೀಡಿದ ಸುಳಿವು ಸಿಕ್ಕರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಸಾವಿರಾರು ಮನೆಗಳನ್ನು ನೀಡಿದರೂ, ಆಶ್ರಯ ಮನೆಗಳಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಅವಕಾಶವಿಲ್ಲ

ಜಿ-ಪ್ಲಸ್ 2 ಯೋಜನೆಯಲ್ಲಿ ಅರ್ಜಿ ಸಲ್ಲಿಸಿ, ಮನೆ ಮಂಜೂರಾದರೂ ಬೇಡವೆಂದೂ ತಿರಸ್ಕರಿಸಿದವರಿಗೆ ಈಗ ಪುರಸಭೆಯಿಂದ ಹೊಸದಾಗಿ ನೀಡಲಾಗುವ ಆಶ್ರಯ ಯೋಜನೆಯಲ್ಲಿ ಅವಕಾಶ ನೀಡಬಾರದು ಎಂದು ದೇಶಪಾಂಡೆ ಆದೇಶಿಸಿದರು. ಅದಕ್ಕಾಗಿ ಪುರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ಹೀಗೆ ಮನೆ ಆಶ್ರಯ ಯೋಜನೆ ಬೇಡವೆಂದು ತಿರಸ್ಕರಿಸಿದವರ ಯಾದಿ ಸಿದ್ಧವಾಗಿಟ್ಟುಕೊಳ್ಳಿ ಎಂದು ಸೂಚಿಸಿದರು.

ಜಿ-ಪ್ಲಸ್ 2 ಯೋಜನೆಯ ಪ್ರಗತಿಯನ್ನು ಮಂಡಿಸಿದ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ 240 ಮನೆಗಳಲ್ಲಿ ಈ ವರೆಗೆ 212 ಫಲಾನುಭವಿಗಳಿಗೆ ಮನೆಯನ್ನು ನೀಡಲಾಗಿದ್ದು, ಇನ್ನೂ ಬಾಕಿ ಉಳಿದ 28 ಮನೆಗಳು ಖಾಲಿಯಿದ್ದು, ಇದರಲ್ಲಿ 12 ಫಲಾನುಭವಿಗಳು ತಮಗೆ ಜಿ-ಪ್ಲಸ್ 2 ಮನೆ ಬೇಡವೆಂದು ತಿಳಿಸಿದ್ದಾರೆ, ಪುರಸಭೆಯು ಮುಂದಿನ ದಿನಗಳಲ್ಲಿ ಹೊಸದಾಗಿ ಆಶ್ರಯ ಮನೆಗಳನ್ನು ವಿತರಿಸಲಿದ್ದರಿಂದ ಈ ಮನೆಗಳನ್ನು ಪಡೆಯುವ ಅಪೇಕ್ಷೆಯಿಂದ ಯಾರೂ ಸಹ ಜಿ-ಪ್ಲಸ್ 2 ಮನೆ ಪಡೆಯಲು ಇಚ್ಛಿಸುತ್ತಿಲ್ಲ ಎಂದರು.

ಸಮಗ್ರ ಪರಿಶೀಲನೆ

ಆಶ್ರಯ ಮನೆಗಳಿಗಾಗಿ ಅರ್ಜಿ ಸಲ್ಲಿಸುವವರ ಆರ್ಥಿಕ ಉತ್ಪನ್ನ, ಆದಾಯದ ಮೂಲ, ನಿಜವಾಗಿಯೂ ಅವರು ವಸತಿ ರಹಿತರೇ ಇವುಗಳನ್ನು ಪುರಸಭೆಯವರು ಗೌಪ್ಯವಾಗಿ ಪರಿಶೀಲನೆ ಮಾಡಿ, ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಿಯೇ ಅವುಗಳ ಯಾದಿಯನ್ನು ನನಗೆ ಸಲ್ಲಿಸಬೇಕು. ನಾನೂ ನೀವು ನೀಡಿದ ಮಾಹಿತಿಯನ್ನು ಆಧರಿಸಿ ನನ್ನ ಮೂಲಗಳಿಂದ ಗೌಪ್ಯ ಪರಿಶೀಲನೆ ನಡೆಸುತ್ತೇನೆ. ಹೀಗೆ ಪರಿಶೀಲನೆಯ ಸಮಯದಲ್ಲಿ ನೀವು ನೀಡಿರುವ ಅರ್ಜಿದಾರರ ಮಾಹಿತಿ ಸುಳ್ಳೆಂದು ಕಂಡು ಬಂದಲ್ಲಿ ಅದಕ್ಕೆ ಅಧಿಕಾರಿಗಳನ್ನು ಮತ್ತು ಸಿಬ್ಬಂದಿ ಬಾಧ್ಯಸ್ಥರನ್ನಾಗಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಆಶ್ರಯ ಸಮಿತಿಯ ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳು ಇದ್ದರು.