ಬಂಗಾರಪೇಟೆ ತಾಲೂಕಿನಲ್ಲಿ ಈಗಾಗಲೇ ವಸತಿರಹಿತ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿದ್ದು, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳ ಜಮೀನನ್ನು ಗುರುತು ಮಾಡಿ ಒಂದು ವರ್ಷದೊಳಗೆ ಹತ್ತು ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಅದಕ್ಕಾಗಿ ಸರ್ಕಾರಿ ಗೊತ್ತುಪಡಿಸಲು ತಹಸೀಲ್ದಾರರಿಗೆ ಜವಾಬ್ದಾರಿ ನೀಡಲಾಗಿದೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳ ಜಮೀನನ್ನು ಗೊತ್ತುಪಡಿಸಿ ೧೦ ಸಾವಿರ ನಿವೇಶನಗಳನ್ನು ವಸತಿರಹಿತರಿಗೆ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಪುರಸಭೆಯ ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜನರ ಆರೋಗ್ಯವನ್ನು ಕಾಪಾಡುವ ಹಿತದೃಷ್ಟಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ ಎಂದರು.ಗೋಮಾಳದಲ್ಲಿ ವಸತಿ ನಿರ್ಮಾಣ
ವಿಶೇಷವಾಗಿ ತಾಲೂಕಿನಲ್ಲಿ ಈಗಾಗಲೇ ವಸತಿರಹಿತ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿದ್ದು, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳ ಜಮೀನನ್ನು ಗುರುತು ಮಾಡಿ ಒಂದು ವರ್ಷದೊಳಗೆ ಹತ್ತು ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಅದಕ್ಕಾಗಿ ಸರ್ಕಾರಿ ಗೊತ್ತುಪಡಿಸಲು ತಹಸೀಲ್ದಾರರಿಗೆ ಜವಾಬ್ದಾರಿ ನೀಡಿದ್ದು, ನಂತರ ಸರ್ವೆ ಹಾಗೂ ಸ್ಕೆಚ್ ಮಾಡಲು ಎಡಿಎಲ್‌ಆರ್ ಅವರಿಗೆ ವಹಿಸಲಾಗಿದೆ. ನಿವೇಶನ ರಹಿತರು ಇದುವರೆಗೂ ನೊಂದಾಯಿಸಿಕೊಂಡಿಲ್ಲವಾದರೆ, ಅಂತಹವರು ಅರ್ಜಿಯನ್ನು ಆಯಾ ಗ್ರಾಮ ಪಂಚಾಯಿತಿ ಸಲ್ಲಿಸಬಹುದಾಗಿದೆ ಎಂದರು.ತಾಲೂಕಿನಲ್ಲಿ ಅರ್ಹತೆಯಿಲ್ಲದೆ ನಕಲಿ ವೈದ್ಯರು ಇದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಇದರೊಟ್ಟಿಗೆ ಪಶು ವೈದ್ಯ ಇಲಾಖೆಯಲ್ಲಿಯೂ ಸಹ ಪ್ರಮಾಣಪತ್ರವಿಲ್ಲದೆ ವೈದ್ಯ ವೃತ್ತಿ ಮಾಡುತ್ತಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಕಡಿಮೆಯಾಗಿದ್ದು, ಅದನ್ನು ಹೆಚ್ಚು ಮಾಡಲು ಮುಖ್ಯೋಪಾಧ್ಯಯರ ಸಭೆಯನ್ನು ಕರೆಯಲಾಗಿದ್ದು, ಗುಣಮಟ್ಟ ಶಿಕ್ಷಣಕ್ಕೆ ಆಧ್ಯತೆ ನೀಡಲಾಗುತ್ತದೆ ಎಂದರು.
ಬೀದಿನಾಯಿಗಳ ಹಾವಳಿಪಟ್ಟಣದ ಸೇರಿದಂತೆ, ಗ್ರಾಮೀಣ ಭಾಗದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ದೂರುಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದೆ. ಪುರಸಭೆಯಿಂದ ಬೀದಿನಾಯಿಗಳನ್ನು ಹಿಡಿಯಲು ೪ ಬಾರಿ ಟೆಂಡರ್ ಕರೆಯಲಾಗಿತ್ತು, ಆದರೆ ಯಾರೂ ಮುಂದೆ ಬರಲಿಲ್ಲ. ಸರ್ಕಾರ ನೀಡುವಂತಹ ಅನುದಾನದೊಂದಿಗೆ, ತಾವೂ ೨೦ ಲಕ್ಷ ಹಣ ನೀಡಲಿದ್ದು, ಅಧ್ಯಕ್ಷರು ಮುತುವರ್ಜಿಯಿಂದ ನಾಯಿ ಹಿಡಿಯುವವರನ್ನು ಕರೆತಂದು ಬೀದಿನಾಯಿಗಳನ್ನು ಹಿಡಿದು ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಎನ್.ಸುಜಾತ, ಗ್ರೇಡ್-೨ ತಹಸೀಲ್ದಾರ್ ಗಾಯಿತ್ರಿ, ಇಓ ರವಿಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಪಾರ್ಥಸಾರಥಿ, ಪುರಸಭೆ ಅಧ್ಯಕ್ಷ ಗೋವಿಂದ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.