ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಮಾಡಿ ಬಿಜೆಪಿ ಹೇಗೆ ಮತಯಾಚಿಸುತ್ತದೆ?

| Published : Mar 22 2024, 01:03 AM IST

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಮಾಡಿ ಬಿಜೆಪಿ ಹೇಗೆ ಮತಯಾಚಿಸುತ್ತದೆ?
Share this Article
  • FB
  • TW
  • Linkdin
  • Email

ಸಾರಾಂಶ

ಬರ ಪರಿಹಾರ, ನ್ಯಾಯಸಮ್ಮತ ಅನುದಾನ ಬಿಡುಗಡೆಯಲ್ಲಿ ಅನ್ಯಾಯ, ಬರಗಾಲವಿದ್ದರೂ ನರೇಗಾ ಕೆಲಸದ ದಿನಗಳ ಹೆಚ್ಚಳಕ್ಕೆ ಸಿಗದ ಅನುಮತಿ ಹೀಗೆ ರಾಜ್ಯಕ್ಕೆ ಸಾಲು, ಸಾಲು ಅನ್ಯಾಯ, ಮೋಸ ಮಾಡುತ್ತಿರುವ ಬಿಜೆಪಿ ಅದ್ಯಾವ ಮುಖ ಹೊತ್ತು ಮತಯಾಚಿಸುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಪ್ರಶ್ನಿಸಿದ್ದಾರೆ.

ಹಾನಗಲ್ಲ: ಬರ ಪರಿಹಾರ, ನ್ಯಾಯಸಮ್ಮತ ಅನುದಾನ ಬಿಡುಗಡೆಯಲ್ಲಿ ಅನ್ಯಾಯ, ಬರಗಾಲವಿದ್ದರೂ ನರೇಗಾ ಕೆಲಸದ ದಿನಗಳ ಹೆಚ್ಚಳಕ್ಕೆ ಸಿಗದ ಅನುಮತಿ ಹೀಗೆ ರಾಜ್ಯಕ್ಕೆ ಸಾಲು, ಸಾಲು ಅನ್ಯಾಯ, ಮೋಸ ಮಾಡುತ್ತಿರುವ ಬಿಜೆಪಿ ಅದ್ಯಾವ ಮುಖ ಹೊತ್ತು ಮತಯಾಚಿಸುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಪ್ರಶ್ನಿಸಿದ್ದಾರೆ.

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಬರ ಘೋಷಣೆ ಮಾಡಿ ೬ ತಿಂಗಳು ಗತಿಸಿದೆ. ೧೮ ಸಾವಿರ ಕೋಟಿ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಖುದ್ದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೂ ಸಹ ಇದುವರೆಗೂ ಒಂದು ರುಪಾಯಿ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ನಮ್ಮ ರಾಜ್ಯದ ರೈತರ ಮೇಲೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಯಾಕಿಷ್ಟು ಕೋಪ? ಎಂದು ಶ್ರೀನಿವಾಸ ಮಾನೆ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಬರ ಬಿದ್ದಿದೆ. ಕೂಲಿಕಾರರು ಉದ್ಯೋಗ ಅರಸಿ ಗುಳೆ ಹೋಗಬಾರದು. ಅವರಿಗೆ ಸ್ಥಳೀಯವಾಗಿ ನರೇಗಾ ಯೋಜನೆಯಡಿ ಕೆಲಸ ನೀಡಲು ಉದ್ಯೋಗದ ದಿನಗಳನ್ನು ೧೫೦ಕ್ಕೆ ಹೆಚ್ಚಳ ಮಾಡಿ ಎನ್ನುವ ರಾಜ್ಯದ ಮನವಿಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಕೇಂದ್ರದ ಅನುಮತಿ ಸಿಗದೆ ನನೆಗುದಿಗೆ ಬಿದ್ದಿವೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಸಂಕಷ್ಟಸೂತ್ರ ರಚನೆಗೂ ಮಧ್ಯಸ್ಥಿಕೆ ವಹಿಸುತ್ತಿಲ್ಲ. ನಮ್ಮ ರಾಜ್ಯಕ್ಕೆ ಹೀಗೆ ಸಾಲು, ಸಾಲು ಅನ್ಯಾಯ ಮಾಡಲಾಗುತ್ತಿದೆ. ಆದರೂ ಕೂಡ ಬಿಜೆಪಿ ಸಂಸದರು, ಮುಖಂಡರು ಮಾತ್ರ ತುಟಿ ಬಿಚ್ಚುತ್ತಿಲ್ಲ, ಗಟ್ಟಿ ಧ್ವನಿಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನಿಸುತ್ತಿಲ್ಲ. ಚುನಾವಣೆಯಲ್ಲಿ ತಮ್ಮ ಸಾಧನೆ, ಜನಪರ ಕೆಲಸ ಹೇಳಿಕೊಳ್ಳುವ ಬದಲಿಗೆ ಮೋದಿಯ ಹೆಸರು ಹೇಳುತ್ತಿದ್ದಾರೆ ಎಂದು ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದ್ದಾರೆ.