ಕನ್ನಡಪ್ರಭ ವಾರ್ತೆ ಮೈಸೂರು
ವಿಜ್ಞಾನ ವಿಷಯಗಳು ಕನ್ನಡದಲ್ಲಿಯೂ ಬರುತ್ತಿರುವುದರಿಂದ ವಿದ್ಯಾರ್ಥಿಗಳು ವಿಜ್ಞಾನದ ಕಡೆ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.ನಗರದ ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣದಲ್ಲಿ ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಜ್ಞಾನ ಸಾಹಿತಿ ಎಸ್. ರಾಮಪ್ರಸಾದ್ ಅವರ ಮುಕ್ತಕ ಕರಂಡಕ ಹಾಗೂ ಕರ್ನಾಟಕದ ಪ್ರಸಿದ್ಧ ಛಾಯಾಚಿತ್ರಗ್ರಾಹಕರು ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ವಿಷಯಗಳು ಇದುವರೆಗೆ ಹೆಚ್ಚಾಗಿ ಇಂಗ್ಲಿಷ್ ನಲ್ಲಿ ಇದ್ದರಿಂದ ಅನೇಕರು ವಿಜ್ಞಾನ ಓದಲು ಆಸಕ್ತಿ ತೋರಲು ಮುಂದಾಗಿರಲಿಲ್ಲ. ಆದರೆ ಇತ್ತೀಚೆಗೆ ಕನ್ನಡದಲ್ಲಿ ಬರೆದಿರುವವರ ಸಂಖ್ಯೆ ಹೆಚ್ಚಿದ್ದು, ಓದುವವರ ಆಸಕ್ತಿಯೂ ಹೆಚ್ಚುತ್ತಿದೆ. ಎಸ್. ರಾಮಪ್ರಸಾದ್ ಅವರಂತ ಲೇಖಕರು ವಿಜ್ಞಾನವನ್ನು ಸರಳವಾದ ಬರವಣಿಗೆಯಲ್ಲಿ ಪುಸ್ತಕ ಹೊರ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.ಭಾಷೆಯ ಕಾರಣದಿಂದಾಗಿ ಅನೇಕರು ವಿಜ್ಞಾನದಿಂದ ದೂರ ಉಳಿಯುತ್ತಾರೆ. ಆದರೆ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಓದಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ವಿಜ್ಞಾನ ವಿಷಯಗಳು ಕೂತೂಹಲ ಮೂಡಿಸುವ ಜೊತೆಯಲ್ಲಿ ಅಚ್ಚರಿಯನ್ನುಂಟು ಮಾಡುತ್ತದೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ. ಅನಂತರಾಮು ಮಾತನಾಡಿ ವಿವೇಕಾನಂದರು, ವಿದ್ಯೆ ಎಂದರೆ ತಮಗೂ ಹಾಗೂ ಲೋಕಕ್ಕೂ ಉಪಯೋಗವಾಗುವುದು ಎಂದು ಹೇಳಿದ್ದಾರೆ. ರಾಮಪ್ರಸಾದ್ ತಮ್ಮ ವಿದ್ಯೆಯನ್ನು ಹಾಗೆಯೇ ಬಳಸಿಕೊಂಡಿದ್ದಾರೆ’ ಎಂದರು.
ಮುಕ್ತಕ ಕರಂಡಕ ಕೃತಿ ಕುರಿತು ಸಾಹಿತಿ ಪ್ರೊ.ಎಸ್. ಶಿವಾಜಿ ಜೋಯಿಸ್, ಕರ್ನಾಟಕದ ಪ್ರಸಿದ್ಧ ಛಾಯಾಚಿತ್ರಗ್ರಾಹಕರು ಕೃತಿ ಕುರಿತು ಲೇಖಕ ಜಿ.ಎಲ್. ತ್ರಿಪುರಾಂತಕ ಮಾತನಾಡಿದರು.
ಗಾವಡಗೆರೆಯ ಗುರುಲಿಂಗ ಜಂಗಮ ದೇವರ ಮಠದ ನಟರಾಜ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್, ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್, ಸಂವಹನ ಪ್ರಕಾಶನದ ಪ್ರಕಾಶಕ ಡಿ.ಎನ್. ಲೋಕಪ್ಪ, ರಂಗನಾಥ್ ಮೈಸೂರು ಇದ್ದರು.