ಸಾರಾಂಶ
ದಾವಣಗೆರೆ: ಭಾರತ ದೇಶವಾಸಿಗಳ ಜೀವ ಮತ್ತು ಜೀವಾಳದಲ್ಲಿ ಬೆರೆತಿರುವ ರಾಮನನ್ನು ಅಯೋಧ್ಯೆಯಲ್ಲಿ ಪುನರ್ ಸ್ಥಾಪಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡುವ ಶುಭಘಳಿಗೆ ಕಣ್ತುಂಬಿಕೊಳ್ಳುತ್ತಿರುವುದು ಸುದೈವ, ಧನ್ಯತೆ ಎಂದು ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ಹೇಳಿದರು.
ಅಯೋಧ್ಯೆಯ ರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಗರದ ನಿಟ್ಟುವಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಲಯ ಮತ್ತು ರಾಷ್ಟ್ರೋತ್ಥಾನ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಗಣದಲ್ಲಿ ಪೋಷಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಭಗವಾನ್ ರಾಮನನ್ನು ನಾವೆಲ್ಲರೂ ಮತ್ತೊಮ್ಮೆ ಅಯೋಧ್ಯೆಯ ಮೂಲ ದೇವಸ್ಥಾನದಲ್ಲಿಯೇ ಕಣ್ತುಂಬಿಕೊಳ್ಳುವ ಸಮಯ ಒದಗಿ ಬರುತ್ತಿದೆ. ಈ ಸಂದರ್ಭದಲ್ಲಿ ಕಾಯಕವನ್ನೇ ಸೇವೆಯಂತೆ ಮಾಡಿ, ರಾಮನಿಗೆ ಭಕ್ತಿ ಸಮರ್ಪಣೆ ಮಾಡುವ ಸಂಕಲ್ಪದಿಂದ, ಆರೋಗ್ಯ ದಾಸೋಹ ಸೇವೆ ನೀಡುತ್ತಿದ್ದೇವೆ ಎಂದು ಹೇಳಿದರು.
ಸಂತೋಷಕರ ಜೀವನಕ್ಕೆ ಆರೋಗ್ಯವಂತ ದೇಹ ಮತ್ತು ಮನಸ್ಸು ಮುಖ್ಯ. ಇದರೊಂದಿಗೆ ದೈನಂದಿನ ಕ್ರಮದಲ್ಲಿ ದೇವರ ಭಕ್ತಿ, ಪ್ರಾರ್ಥನೆಗಳು ಸೇರಿಕೊಂಡಾಗ ನಮ್ಮ ಬದುಕು ಪರಿಪೂರ್ಣವಾಗುತ್ತದೆ. ಇದರ ಜತೆಗೆ ಉತ್ತಮ ಹವ್ಯಾಸ, ಆಹಾರ ಪದ್ಧತಿ, ಯೋಗ, ಧ್ಯಾನಗಳನ್ನು ರೂಢಿಸಿಕೊಳ್ಳಬೇಕು. ಜತೆಗೆ ಕರುಣೆ, ಸ್ನೇಹ, ಪರೋಪಕಾರ, ಪ್ರೀತಿಯೆಂಬ ಭಾವನೆಗಳನ್ನು ಮನಸ್ಸನ್ನು ಸದಾ ಆರೋಗ್ಯವಾಗಿ ಇರಿಸುತ್ತವೆ ಎಂದು ಹೇಳಿದರು.ವೇಗದ ಮತ್ತು ಆಧುನಿಕ ಜಗತ್ತಿನಲ್ಲಿ ಎಲ್ಲ ಸಂಪತ್ತು, ಐಶ್ವರ್ಯಕ್ಕಂತಲೂ ಆರೋಗ್ಯವೇ ಭಾಗ್ಯ ಎಂಬ ಸತ್ಯ ಎಲ್ಲರಿಗೂ ಈಗ ಅರ್ಥವಾಗಿದೆ. ಆದರೆ, ಕೆಲಸದ ಒತ್ತಡ, ಸಮಯದ ಅಭಾವ ಮತ್ತು ಆಸ್ಪತ್ರೆಗಳ ಅಲಭ್ಯತೆ ಕಾರಣದಿಂದ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆದರೆ, ಇದರಿಂದಾಗಿ ಅನಿರೀಕ್ಷಿತವಾಗಿ ದೊಡ್ಡ ಅಪಾಯಗಳು ಎದುರಾಗುವ ಸಂಭವೂ ಹೆಚ್ಚಿರುತ್ತದೆ. ಇದರ ಭಾಗವಾಗಿಯೇ ಇತ್ತೀಚಿಗೆ ಹೃದಯಾಘಾತ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್‌ನಂತ ಸಂಕಷ್ಟಗಳು ಎದುರಾಗುತ್ತಿವೆ ಎಂದರು.
ತಪಾಸಣೆ ಶಿಬಿರದಲ್ಲಿ ಸುಮಾರು 200ಕ್ಕೂ ಪೋಷಕರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಂಶುಪಾಲರು, ಹಿರಿಯ ಶಿಕ್ಷಕರು ಹಾಜರಿದ್ದರು.