14ರಿಂದ 15 ವರ್ಷದ ಬಾಲಕಿಯರಿಗೆ ಉಚಿತವಾಗಿ ನೀಡಲಾಗುತ್ತಿರುವ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ಲಸಿಕಾ ಅಭಿಯಾನದಲ್ಲಿ ಆರಂಭದಲ್ಲಿ ಹಿಂದುಳಿದಿದ್ದ ಧಾರವಾಡ ಜಿಲ್ಲೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯದ ಕಾರ್ಯಾಚರಣೆಯಿಂದ ಗಮನಾರ್ಹ ಪ್ರಗತಿ ಸಾಧಿಸಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:14ರಿಂದ 15 ವರ್ಷದ ಬಾಲಕಿಯರಿಗೆ ಉಚಿತವಾಗಿ ನೀಡಲಾಗುತ್ತಿರುವ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ಲಸಿಕಾ ಅಭಿಯಾನದಲ್ಲಿ ಆರಂಭದಲ್ಲಿ ಹಿಂದುಳಿದಿದ್ದ ಧಾರವಾಡ ಜಿಲ್ಲೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯದ ಕಾರ್ಯಾಚರಣೆಯಿಂದ ಗಮನಾರ್ಹ ಪ್ರಗತಿ ಸಾಧಿಸಿದೆ.ಒಂದೇ ವಾರದಲ್ಲಿ 4,546 ಬಾಲಕಿಯರಿಗೆ ಲಸಿಕೆ ನೀಡುವ ಮೂಲಕ ಜಿಲ್ಲೆಯು ರಾಜ್ಯದ ಗಮನ ಸೆಳೆದಿದೆ. ಈ ಮೂಲಕ ಕೊನೆಯ ಸಾಲಿನಿಂದ 14ನೇ ಸ್ಥಾನಕ್ಕೇರಿದೆ. ಜಿಲ್ಲೆಯಲ್ಲಿ 15,080 ಬಾಲಕಿಯರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು ಈ ವರೆಗೆ 12,090 ಬಾಲಕಿಯರಿಗೆ ಲಸಿಕೆ ನೀಡಲಾಗಿದೆ. ಜೂ. 13ರ ವರೆಗೆ 6,698 ಬಾಲಕಿಯರಿಗೆ ಮಾತ್ರ ಲಸಿಕೆ ಪರಿಣಾಮ ಲಸಿಕಾಕರಣದಲ್ಲಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿತ್ತು. ಬಳಿಕ ಜಿಪಂ ಸಿಇಒ ಭುವನೇಶ್ ಪಾಟೀಲ ಅವರ ನಿರ್ದೇಶನದಂತೆ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಡಿಡಿಪಿಐ, ಬಿಇಒ ಹಾಗೂ ಶಾಲಾ ಮುಖ್ಯ ಶಿಕ್ಷಕರು ಜಂಟಿಯಾಗಿ ವಿಶೇಷ ಜಾಗೃತಿ ಅಭಿಯಾನ ಕೈಗೊಂಡ ಪರಿಣಾಮ ಲಸಿಕಾ ಕಾರ್ಯಕ್ರಮ ವೇಗ ಪಡೆದುಕೊಂಡಿದೆ.ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ ಈ ಅಭಿಯಾನ ಜಾರಿಗೊಳಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ₹4,000ರಿಂದ ₹10,000 ವರೆಗೆ ವೆಚ್ಚವಾಗುವ ಎಚ್‌ಪಿವಿ ಲಸಿಕೆಯನ್ನು ಸರ್ಕಾರ ಉಚಿತವಾಗಿ ನೀಡುತ್ತಿರುವುದು ಅಭಿಯಾನಕ್ಕೆ ಮತ್ತಷ್ಟು ಬಲ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ನಗರ ಪ್ರದೇಶದ ಖಾಸಗಿ ಹಾಗೂ ಅನುದಾನರಹಿತ ಶಾಲೆಗಳ ವಿದ್ಯಾರ್ಥಿನಿಯರ ಮೇಲೆ ವಿಶೇಷ ಗಮನ ಹರಿಸಲಾಗಿದೆ.
ಏನಿದು ಎಚ್‌ಪಿವಿ ಲಸಿಕೆ?:ಎಚ್‌ಪಿವಿ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಮತ್ತು ಲೈಂಗಿಕ ಸಂಪರ್ಕದ ಮೂಲಕ ಹರಡುವ ಕೆಲವು ಅಪಾಯಕಾರಿ ವೈರಸ್‌ಗಳಿಂದ ದೇಹವನ್ನು ರಕ್ಷಿಸುವ ಪರಿಣಾಮಕಾರಿ ರೋಗ ನಿರೋಧಕ ಲಸಿಕೆಯಾಗಿದೆ. ಇದು ಗಂಟಲು, ಗುದನಾಳ ಮತ್ತು ಜನನಾಂಗದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ.ಒಟ್ಟು 5,08 ಲಕ್ಷದಲ್ಲಿ 3,77 ಲಕ್ಷ ಡೋಸ್ ಬಳಕೆಕೇಂದ್ರ ಸರ್ಕಾರದ ಲಸಿಕಾ ಕಾರ್ಯಕ್ರಮದ ಪ್ರಮುಖ ಭಾಗವಾಗಿರುವ ಯು-ವಿನ್ ಪೋರ್ಟಲ್ ಅಂಕಿ-ಅಂಶಗಳ (ಜುಲೈ 24) ಪ್ರಕಾರ ರಾಜ್ಯದಲ್ಲಿ ಒಟ್ಟು 5,08,025 ಡೋಸ್‌ಗಳಲ್ಲಿ 3,77,194 ಡೋಸ್ ಬಳಕೆಯಾಗಿದ್ದು, ಒಟ್ಟು ಶೇ. 74.2ರಷ್ಟು ಆಗಿದೆ. ಕಲಬುರಗಿ, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳು ತಲಾ ಶೇ. 97.2 ಸಾಧನೆಯೊಂದಿಗೆ ಅಗ್ರಸ್ಥಾನದಲ್ಲಿವೆ. ದಕ್ಷಿಣ ಕನ್ನಡ ಶೇ. 44.8 ಸಾಧನೆಯೊಂದಿಗೆ ಕೊನೆಯ ಸ್ಥಾನದಲ್ಲಿದೆ. ಕೊಪ್ಪಳ 12ನೇ, ಧಾರವಾಡ 14ನೇ, ಹಾವೇರಿ 23ನೇ, ಗದಗ 28ನೇ ಹಾಗೂ ಬಾಗಲಕೋಟೆ 30ನೇ ಸ್ಥಾನದಲ್ಲಿವೆ.ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ಅತ್ಯಂತ ಪರಿಣಾಮಕಾರಿ. ಆರಂಭದಲ್ಲಿ ಅಭಿಯಾನ ನಿಧಾನವಾಗಿದ್ದರೂ ಈಗ ಉತ್ತಮ ಪ್ರಗತಿ ಕಂಡುಬಂದಿದೆ. ಉಳಿದಿರುವ ಎಲ್ಲ ಅರ್ಹ ಬಾಲಕಿಯರಿಗೂ ಶೀಘ್ರದಲ್ಲೇ ಲಸಿಕೆ ನೀಡಲಾಗುವುದು.ಡಾ. ಪರಶುರಾಮ ಎಫ್.ಕೆ. ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ