ಸಾರಾಂಶ
ಹುಬ್ಬಳ್ಳಿ: ಸ್ಥಳೀಯ ಸ್ವರ್ಣ ಸಮೂಹದ ಪ್ರಾಯೋಜಕತ್ವದಲ್ಲಿ ಎನ್.ಎಲ್.ಇ. ಸೊಸೈಟಿ, ಫ್ರೆಂಡ್ಸ್ ಟ್ರಸ್ಟ್, ಹುಬ್ಬಳ್ಳಿ ಚೆಸ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ದೇಶಪಾಂಡೆ ನಗರದ ರಾಘವೇಂದ್ರ ಸಭಾ ಭವನದಲ್ಲಿ ಭಾನುವಾರ ನಡೆದ ಎನ್ ಎಲ್. ಇ. ಚೆಸ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ ಚೆಸ್ ಅಕಾಡೆಮಿ ತಂಡ ಸಮಗ್ರ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
8, 12, 16 ಹಾಗೂ 25 ವರ್ಷದೊಳಗಿನ ಬಾಲಕರು, ಬಾಲಕಿಯರ ವಿಭಾಗದಲ್ಲಿ ನಡೆದ ಸ್ಪರ್ಧೆಗಳನ್ನು ಚೆಸ್ ಆಡುವ ಮೂಲಕ ಉದ್ಘಾಟಿಸಿ, ಸಂಜೆ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಸ್ವರ್ಣ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ. ಚಿಗುರುಪಾಟಿ ವಿ.ಎಸ್.ವಿ ಪ್ರಸಾದ್, ಚೆಸ್ ಸಹಿತ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆಯೇ ನಿಜವಾದ ಗೆಲುವು. ಮೊದಲ, ದ್ವಿತೀಯ, ತೃತೀಯ ಬಹುಮಾನ ಎಲ್ಲ ಕೇವಲ ಸಂಖ್ಯೆಗಳು ಮಾತ್ರ. ಓದಿನ ಜತೆ ಕ್ರೀಡೆಗಳಲ್ಲೂ ಭಾಗವಹಿಸಬೇಕು. ರಾಜ್ಯದ ಎಲ್ಲ ಕಡೆಯಿಂದ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇದರಲ್ಲಿ ಪಾಲಕರು ಪಾತ್ರ ದೊಡ್ಡದಿದೆ ಎಂದರು.ಚದುರಂಗದಾಟ ನಿಮ್ಮ ಕೌಶಲ್ಯ, ತಂತ್ರಗಾರಿಕೆ, ಯೋಚನಾ ವಿಧಾನದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಪರಿಣಿತಿ ಸಾಧಿಸಿದಲ್ಲಿ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಬಗೆಹರಿಸಿ ತಾರ್ಕಿಕ ಅಂತ್ಯ ಕಾಣಬಹುದು ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಖ್ಯಾತ ಕ್ರಿಕೆಟ್ ತರಬೇತುದಾರರಾದ ಶಿವಾನಂದ ಗುಂಜಾಳ, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಲು ಕರೆ ನೀಡಿದರು.ಎನ್.ಎಲ್.ಇ. ಸಂಸ್ಥೆ ಉಪಾಧ್ಯಕ್ಷ ಸದಾನಂದ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶಿವರಾಂ ಹೆಗಡೆ, ಪ್ರಕಾಶ್ ನಾಯಕ್ ಸಹಿತ ಇತರ ಗಣ್ಯರು ಪಾಲ್ಗೊಂಡಿದ್ದರು.
ಫ್ರೆಂಡ್ಸ್ ಟ್ರಸ್ಟ್ ಅಧ್ಯಕ್ಷ ಗುರುರಾಜ ಕುಲಕರ್ಣಿ ನಿರೂಪಿಸಿದರು. ಅಂತಾರಾಷ್ಟ್ರೀಯ ತೀರ್ಪುಗಾರರಾದ ಕೆ.ವಿ. ಶ್ರೀಪಾದ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ವಿವಿಧ ವಿಭಾಗಗಳಲ್ಲಿ ವಿಜೇತರಿಗೆ 40 ಟ್ರೋಫಿ, ಪದಕ ವಿತರಿಸಲಾಯಿತು.ಬೆಳಗಾವಿ ಆಕಾಶ ಚೆಸ್ ಅಕಾಡೆಮಿ ಸಮಗ್ರ ದ್ವಿತೀಯ ಸ್ಥಾನ ಪಡೆಯಿತು. ಎಂಟು ವರ್ಷ ಒಳಗಿನ ವಿಭಾಗದಲ್ಲಿ ಆದಿತ್ಯ ಕಲ್ಲೊಳಿ, ಸುಮೇರಾ ಶಿವರಾಜ್ ಕಟಗಿ, 12ರೊಳಗಿನ ವಿಭಾಗದಲ್ಲಿ ಸಿದ್ಧಾಂತ ತಬಜ, ಶ್ರೇಯಾ ಅಮೀನ್, ಹದಿನಾರರ ಒಳಗಿನ ವಿಭಾಗದಲ್ಲಿ ಜಯರಾಂ ಭಟ್, ಶಿಮರಾ ನದಾಫ್, 25ರೊಳಗಿನ ವಿಭಾಗದಲ್ಲಿ ಪ್ರೀತಮ್ ಹನುಮರೆಡ್ಡಿ, ಚಿನ್ಮಯಿ ಸಜ್ಜನ ಮೊದಲ ಸ್ಥಾನ ಪಡೆದರು. ಗದಗ, ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ಕಾರವಾರ ಸೇರಿದಂತೆ ಹಲವೆಡೆಯಿಂದ ಆಟಗಾರರು ಆಗಮಿಸಿದ್ದರು.
)
;Resize=(128,128))
;Resize=(128,128))