ಕಳೆದ ವರ್ಷ ಮಹಾನಗರ ಪಾಲಿಕೆ ಮಂಡಿಸಿರುವ ಬಜೆಟ್‌ನಲ್ಲಿ ಯಾವೊಂದು ಯೋಜನೆಗಳು ಅನುಷ್ಠಾನಗೊಂಡಿಲ್ಲ. ಹಳೆ ಯೋಜನೆಗಳಿಗೆ ಒತ್ತು ನೀಡುವುದರ ಜತೆ ಜತೆಗೆ ಜನಪರ ಯೋಜನೆಗಳನ್ನು ಮಂಡಿಸುವ ಮೂಲಕ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುವ ಯೋಚನೆ ಪಾಲಿಕೆ ಆಡಳಿತ ಪಕ್ಷದ್ದು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಜ್ಯದ 2ನೇ ದೊಡ್ಡ ಮಹಾನಗರ ಎನಿಸಿರುವ ಹುಬ್ಬಳ್ಳಿ-ಧಾರವಾಡ ಪಾಲಿಕೆಯು ಪ್ರಸಕ್ತ ಸಾಲಿನ ಬಜೆಟ್‌ನ್ನು ಮಾ. 16ರಂದು ಮಂಡಿಸಲಿದೆ. 2025-26ರ ಸಾಲಿನ ಆರ್ಥಿಕ ವರ್ಷದಲ್ಲಿ ₹ 1512.67 ಕೋಟಿ ಗಾತ್ರದ ಬಜೆಟ್‌ ಮಂಡಿಸಿದರೆ, ಈ ಬಾರಿ ಅದು ₹ 1600 ಕೋಟಿಗೂ ಅಧಿಕವಾಗುವ ಸಾಧ್ಯತೆ ಇದೆ. ಇನ್ನು ಮಹಿಳಾ ಕೇಂದ್ರೀತ ಅಂದರೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಕಳೆದ ವರ್ಷ ಮಂಡಿಸಿರುವ ಬಜೆಟ್‌ನಲ್ಲಿ ಯಾವೊಂದು ಯೋಜನೆಗಳು ಅನುಷ್ಠಾನಗೊಂಡಿಲ್ಲ. ಹಳೆ ಯೋಜನೆಗಳಿಗೆ ಒತ್ತು ನೀಡುವುದರ ಜತೆ ಜತೆಗೆ ಜನಪರ ಯೋಜನೆಗಳನ್ನು ಮಂಡಿಸುವ ಮೂಲಕ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುವ ಯೋಚನೆ ಪಾಲಿಕೆ ಆಡಳಿತ ಪಕ್ಷದ್ದು.

ಏನೇನು ಸಾಧ್ಯತೆ:

ಮಹಿಳಾ ಮೇಯರ್‌, ಹಣಕಾಸು, ತೆರಿಗೆ ಸುಧಾರಣೆ ಸ್ಥಾಯಿ ಸಮಿತಿ ಚೇರಮನರು ಕೂಡ ಮಹಿಳೆಯೇ ಇರುವುದರಿಂದ ಈ ಸಲದ ಬಜೆಟ್‌ನಲ್ಲಿ ಮಹಿಳೆಯರಿಗೆ ಕೊಂಚ ಆದ್ಯತೆ ಸಿಗುವ ಸಾಧ್ಯತೆಯುಂಟು. ಯಾವ ರೀತಿ ಮಹಿಳೆಯರಿಗೆ ಆದ್ಯತೆ ಸಿಗುತ್ತದೆ ಎಂಬುದನ್ನು ನೋಡಬೇಕಷ್ಟೇ.. ಇನ್ನು ವಾರ್ಡ್‌ ಅನುದಾನ ಕಳೆದ 1.25 ಕೋಟಿ ರೂ. ಇತ್ತು. ಅದೀಗ 2 ಕೋಟಿವರೆಗೂ ತಲುಪುವ ಸಾಧ್ಯತೆ ಇದೆ. ಇನ್ನು ಪೌರಕಾರ್ಮಿಕರ ವೇತನ, ಪತ್ರಕರ್ತರಿಗೆ ವಿಮೆ ಸೇರಿದಂತೆ ಕೆಲವೊಂದಿಷ್ಟು ಹೊಸ ಯೋಜನೆಗಳನ್ನು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾ ವಂಟಮೂರಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕಳೆದ ವರ್ಷ ಬರೀ 130 ಕೋಟಿ ಟ್ಯಾಕ್ಸ್‌ ಸಂಗ್ರಹವಾಗಿತ್ತು. ಈ ವರ್ಷ ಅದು ₹ 186 ಕೋಟಿಗೂ ಅಧಿಕವಾಗಿದೆ. ಹೀಗಾಗಿ ಪ್ರಸಕ್ತ ಸಾಲಿನ ತೆರಿಗೆಯಿಂದ 330 ಕೋಟಿ ಸಂಗ್ರಹದ ಗುರಿ ಇಟ್ಟುಕೊಂಡಿದೆನ್ನಲಾಗಿದೆ. ಅದು ಕೂಡ ಬಜೆಟ್‌ನಲ್ಲಿ ಬಹಿರಂಗವಾಗಲಿದೆ. ಒಟ್ಟಿನಲ್ಲಿ ಬಜೆಟ್‌ ಗಾತ್ರ 1600 ಕೋಟಿಗೂ ಮೀರಲಿದೆ ಎಂದು ಮೂಲಗಳು ತಿಳಿಸಿವೆ.

ಹಳೆ ಯೋಜನೆಗಳಾದ ನಿರಂತರ ಕುಡಿಯುವ ನೀರು ಸರಬರಾಜು, ರಸ್ತೆ, ಕಸ ವಿಲೇವಾರಿ ಸೇರಿದಂತೆ ಜಾರಿಯಲ್ಲಿರುವ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಈ ಬಜೆಟ್‌ ಇಟ್ಟುಕೊಳ್ಳಬೇಕಿದೆ. ರಾಜ್ಯದ 2ನೇ ದೊಡ್ಡ ನಗರವಾದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಈಗಲೂ ದೊಡ್ಡ ಹಳ್ಳಿಯಂತೆ ಭಾಸವಾಗುತ್ತದೆ. ರಸ್ತೆಯಲ್ಲಿ ಗುಂಡಿ, ಧೂಳಿನ ಮಜ್ಜನ, ಪಾರ್ಕಿಂಗ್‌ ಸಮಸ್ಯೆ ಸೇರಿದಂತೆ ಇ-ಸ್ವತ್ತುವಿನಲ್ಲಿ ಆಗುತ್ತಿರುವ ಅಡಚಣೆ, ಕರ ವಸೂಲಿಯಲ್ಲಿ ಹಿಂದಿಳಿರುವುದು ಸೇರಿದಂತೆ ಅನೇಕ ಸಮಸ್ಯೆಗಳ ಸರಮಾಲೆಯನ್ನೆ ಸುತ್ತಿಕೊಂಡಿದೆ.

ಕುಡಿಯುವ ನೀರು:

ಮಹಾನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆ ಜಾರಿಯಾಗಿ 3 ವರ್ಷಕ್ಕೂ ಅಧಿಕ ಸಮಯವಾಗಿದ್ದರೂ ಈ ವರೆಗೂ ಪೂರ್ಣಿಗೊಂಡಿಲ್ಲ. ನಿಗದಿಪಡಿಸಿದ ಅವಧಿ ಮುಗಿದಿದ್ದರೂ ಎಲ್‌ ಆ್ಯಂಡ್‌ ಟಿ ಪ್ರಕಾರ ಶೇ. 45ರಷ್ಟು ಮಾತ್ರ ಮನೆಗಳಿಗೆ ಪೈಪ್‌ಲೈನ್‌ ಅಳವಡಿಸಲಾಗಿದೆ. ಹೀಗಾಗಿ ಈ ಅವಧಿಯನ್ನು ಜೂನ್‌ 2027ಕ್ಕೆ ವಿಸ್ತರಿಸಲಾಗಿದೆ.

ಕಸ ಕೊಡಿ ಹಣ ಪಡಿ:ಕಳೆದ ವರ್ಷ ಘೋಷಿಸಿದ್ದ ತ್ಯಾಜ್ಯ ನಿಯಂತ್ರಣಕ್ಕೆ ಮುಂದಾಗಿ ಕಸ ಕೊಡಿ ಹಣ ಪಡಿ ಬರೀ ಘೋಷಣೆಗಷ್ಟೇ ಸೀಮಿತವಾಗಿತ್ತು. ನಗರದ ಹೊರವಲಯಗಳು ಡಂಪಿಂಗ್‌ ಯಾರ್ಡ್‌ಗಳಾಗಿ ಪರಿವರ್ತನೆ ಆಗುತ್ತಿವೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಐಎಸ್‌ ಸರ್ವೇ:

ನಗರದಲ್ಲಿ ಹೆಚ್ಚಿನ ಕಟ್ಟಡಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟವಾಗುತ್ತಿದೆ. ಇದನ್ನು ತಡೆಯಬೇಕೆಂದು ಆಸ್ತಿಗಳ ಸರ್ವೇ ಮಾಡಲು ಜಾರಿಗೆ ತಂದಿದ್ದ ಜಿಐಎಸ್‌ ಸರ್ವೇ 2025-26ರಲ್ಲಿಯೇ ಪೂರ್ಣವಾಗಲಿದೆ. ಇದರಿಂದ ತೆರಿಗೆ ಸಂಗ್ರಹದಲ್ಲಿ ಮೂರು ಪಟ್ಟು ಹೆಚ್ಚಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ವರೆಗೂ ಮುಗಿದಿಲ್ಲ. ವೈಮಾನಿಕ ಸಮೀಕ್ಷೆ ಪೂರ್ಣಗೊಂಡಿದ್ದು, ಡಾಟಾ ಎಂಟ್ರಿ ಹಾಗೂ ಮನೆ-ಮನೆ ಮಾಹಿತಿ ಸಂಗ್ರಹ ಕೆಲಸ ಬಾಕಿ ಇದೆ. ಬೀದಿದೀಪ ಹಾಗೂ ನಗರ ಸೌಂದರ್ಯಕರಣಕ್ಕೆ 77 ಸಾವಿರ ಎಲ್‌ಇಡಿ ಬಲ್ಬ್‌ ಅಳವಡಿಸುವುದು ಸಹ ಈಡೇರಿಲ್ಲ.

ಆಗಿರುವುದೇನು?:

ಪಾಲಿಕೆ ಸಭಾಭವನ ನಿರ್ಮಾಣ ಕಾಮಗಾರಿ ಆರಂಭ, ಜನತಾ ಬಜಾರ್‌ನ ಮಳಿಗೆಗಳ ಹರಾಜು ಪ್ರಕ್ರಿಯೆ, 66 ಆಟೋ ಟಿಪ್ಪರ್‌ ಖರೀದಿಸಿರುವುದನ್ನು ಬಿಟ್ಟರೆ ಕಳೆದ ಬಜೆಟ್‌ ಯಾವ ಯೋಜನೆಯೂ ಸಾಕಾರವಾಗಿಲ್ಲ.