ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹತ್ವಾಂಕಾಕ್ಷಿ ಯೋಜನೆಯಾದ ಟೊರ್ರಿಫೈಡ್‌ ಚಾರ್‌ಕೋಲ್‌ (ಇದ್ದಿಲು) ತಯಾರಿಕಾ ಘಟಕಕ್ಕೆ ಕೊನೆಗೂ ಚಾಲನೆ ದೊರೆತಿದೆ.

ಥರ್ಮಲ್‌ ಪವರ್‌ ಪ್ಲಾಂಟ್‌ಗೆ ಬಳಸುವ ಚಾರ್‌ಕೋಲ್‌ ತಯಾರಿಸುವ ಕೆಲಸ ಸದ್ಯಕ್ಕೆ ಪ್ರಾಯೋಗಿಕವಾಗಿ ನಡೆಯುತ್ತಿದೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಚಾರ್‌ಕೋಲ್‌ ಉತ್ಪಾದನೆಯಾದರೆ ರಾಜ್ಯದ ಪ್ರಥಮ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರಿಂದ ಒಣಕಸವೂ ವೈಜ್ಞಾನಿಕವಾಗಿ ವಿಲೇವಾರಿ ಕೂಡ ಆದಂತಾಗಲಿದೆ.

ತ್ಯಾಜ್ಯ ಸಂಗ್ರಹವೆಷ್ಟು?:


ಮಹಾನಗರದಲ್ಲಿ ನಿತ್ಯ ಬರೋಬ್ಬರಿ 400-420 ಟನ್‌ ತ್ಯಾಜ್ಯ ಸಂಗ್ರಹವಾಗುತ್ತದೆ. ಇದರಲ್ಲಿ 300 ಟನ್‌ ಮನೆ-ಮನೆಯಿಂದ ಸಂಗ್ರಹವಾದರೆ, 100-120 ಟನ್‌ ರಸ್ತೆ ಬದಿ, ಬ್ಲಾಕ್‌ ಸ್ಪಾಟ್‌ ಸೇರಿದಂತೆ ವಿವಿಧೆಡೆ ಪ್ರತ್ಯೇಕಿಸದ ತ್ಯಾಜ್ಯವಾಗಿದೆ. ಇದನ್ನು ಮರುಬಳಕೆ ಮಾಡಲು ಬರುವುದಿಲ್ಲ. ನೇರವಾಗಿ ಡಂಪಿಂಗ್‌ ಯಾರ್ಡ್‌ಗೆ ಒಯ್ಯಬೇಕು. ಆದರೆ, ಮನೆ-ಮನೆಯಿಂದ ಸಂಗ್ರಹಿಸುವ ತ್ಯಾಜ್ಯನಲ್ಲಿ ಶೇ.60ರಷ್ಟು ಒಣಕಸವಿದ್ದರೆ, ಶೇ.40ರಷ್ಟು ಹಸಿ ತ್ಯಾಜ್ಯವಿರುತ್ತದೆ ಎಂಬುದು ಲೆಕ್ಕಾಚಾರ. ಈ ಒಣ ಕಸದಿಂದ ಟೋರ್ರಿಫೈಡ್ ಚಾರ್‌ಕೋಲ್‌ ಉತ್ಪಾದನೆ ಮಾಡಲಾಗುತ್ತಿದೆ.

ಮಹಾನಗರ ಪಾಲಿಕೆಯು 2019ರಲ್ಲಿ ಎನ್‌ಟಿಪಿಸಿ-ವಿದ್ಯುತ್‌ ವ್ಯಾಪಾರ ನಿಗಮದೊಂದಿಗೆ 25 ವರ್ಷವರೆಗೆ ಒಪ್ಪಂದ ಮಾಡಿಕೊಂಡಿತ್ತು. ಜತೆಗೆ ಗಬ್ಬೂರನಲ್ಲಿ 10 ಎಕರೆ ಜಮೀನನ್ನು ನೀಡಿತ್ತು. ಆದರೆ, ಕೊರೋನಾ ಮಹಾಮಾರಿಯಿಂದಾಗಿ 2022ರ ವರೆಗೂ ಬರೀ ಒಪ್ಪಂದವಾಗಿಯೇ ಉಳಿದಿತ್ತು. ಬಳಿಕ ಇದರ ಸಿವಿಲ್‌ ವರ್ಕ್‌, ಯಂತ್ರ ಅಳವಡಿಕೆ ಸೇರಿದಂತೆ ಉಳಿದ ಎಲ್ಲ ಕೆಲಸಗಳನ್ನು ಕಂಪನಿಯೂ ಮುಗಿಸಿಕೊಂಡಿದೆ.

ಎನ್‌ಟಿಪಿಸಿಯೂ ಪಾಲಿಕೆ ಕೊಡುವ ಒಣಕಸದಿಂದ ಟೊರ್ರಿಫೈಡ್‌ ಚಾರ್‌ಕೋಲ್‌ ಸಿದ್ಧಪಡಿಸುತ್ತದೆ. ಪ್ರತಿದಿನ 200 ಟನ್‌ ತ್ಯಾಜ್ಯ ಬಳಸಿ ಟೊರ್ರಿಫೈಡ್‌ ಚಾರ್‌ಕೋಲ್‌ ಉತ್ಪಾದಿಸುವ ಸಾಮರ್ಥ್ಯದ ಘಟಕವಿದು. ಮಹಾನಗರ ಪಾಲಿಕೆಯೂ ಕನಿಷ್ಠ 160 ಟನ್‌ ಒಣಕಸ ಅಥವಾ ದಹನಕಾರಿ ತ್ಯಾಜ್ಯವನ್ನು ನೀಡಬೇಕಾಗುತ್ತದೆ. ಅದರಿಂದ ಟೊರ್ರಿಫೈಡ್‌ ಚಾರ್‌ಕೋಲ್‌ ಉತ್ಪಾದಿಸುತ್ತದೆ.

ಇಲ್ಲಿ ಉತ್ಪಾದನೆಯಾಗುವ ಚಾರ್‌ಕೋಲ್‌ನ್ನು ಥರ್ಮಲ್‌ ಪವರ್‌ ಪ್ಲಾಂಟ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಕಲ್ಲಿದ್ದಲು ಜೊತೆ, ಜೊತೆಗೆ ಈ ಚಾರ್‌ಕೋಲ್‌ ಅನ್ನು ವಿದ್ಯುತ್‌ ಉತ್ಪಾದನೆಗೆ ಬಳಸಬಹುದಾಗಿದೆ. ಈ ಚಾರ್‌ಕೋಲ್‌ ಬಳಕೆಯಿಂದ ಶೇ.60-70ರಷ್ಟು ಕಲ್ಲಿದ್ದಲು ಬಳಕೆ ಕಡಿಮೆ ಮಾಡಬಹುದು ಎಂದು ಅಧಿಕಾರಿ ವರ್ಗ ತಿಳಿಸುತ್ತದೆ.

ಇದು ಸಾಮಾನ್ಯ ಇದ್ದಿಲಿಗಿಂತ ಹೆಚ್ಚು ಶಕ್ತಿ, ಕಡಿಮೆ ತೇವಾಂಶ ಮತ್ತು ಕಡಿಮೆ ಹೊಗೆಯನ್ನು ಹೊಂದಿರುತ್ತದೆ. ಇದು ಪರಿಸರ ಸ್ನೇಹಿ ಮತ್ತು ಸಮರ್ಥನೀಯ ಇಂಧನ ಮೂಲವಾಗಿದೆ. ದೀರ್ಘಕಾಲದವರೆಗೆ ಉರಿಯುವ ಸಾಮರ್ಥ್ಯ ಮತ್ತು ಉತ್ತಮ ಗುಣಮಟ್ಟದ ಶಾಖವನ್ನು ನೀಡುತ್ತದೆ.ಪಾಲಿಕೆಗೇನು ಲಾಭ?:

ಒಣಕಸದ ವಿಲೇವಾರಿ ಸಮಸ್ಯೆ ನಿವಾರಣೆಯಾಗುತ್ತದೆ. ರಾಶಿ, ರಾಶಿ ಗುಡ್ಡೆ ಬೀಳುವುದು ತಪ್ಪುತ್ತದೆ. ಜತೆಗೆ ಸಂಗ್ರಹವಾಗುವ ಒಣಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕೆಂದರೆ ಕನಿಷ್ಠವೆಂದರೂ ವರ್ಷಕ್ಕೆ ₹ 2ರಿಂದ ₹ 3 ಕೋಟಿ ಖರ್ಚಾಗುತ್ತಿದ್ದು ಅದು ಉಳಿತಾಯವಾಗುತ್ತದೆ. ತ್ಯಾಜ್ಯವೆಲ್ಲ ಮರುಬಳಕೆಯಾಗಿ ಪರಿಸರ ರಕ್ಷಣೆಯೂ ಆಗಲಿದೆ. ತ್ಯಾಜ್ಯ ಮುಕ್ತ ನಗರ ಆಗಲು ಅನುಕೂಲವಾಗಲಿದೆ. ಕಳೆದ ಎಂಟ್ಹತ್ತು ದಿನಗಳಿಂದ ಪ್ರಾಯೋಗಿಕವಾಗಿ ಟೊರ್ರಿಫೈಡ್‌ ಚಾರ್‌ಕೋಲ್‌ ಉತ್ಪಾದನೆ ನಡೆಯುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆಗಳಲ್ಲೇ ಮೊದಲು:

ಬೆಂಗಳೂರಲ್ಲಿ (ಬಿಬಿಎಂಪಿ) ಕೆಪಿಸಿಯಿಂದ ಒಣ ಕಸದಿಂದ ವಿದ್ಯುತ್‌ ಉತ್ಪಾದನೆಗೆ ಘಟಕ ಮಾಡಿಕೊಂಡಿದೆ. ಅದನ್ನು ಹೊರತುಪಡಿಸಿದರೆ, ಉಳಿದ 10 ಮಹಾನಗರ ಪಾಲಿಕೆಗಳ ಪೈಕಿ ಟೋರ್ರಿಫೈಡ್‌ ಚಾರ್‌ಕೋಲ್‌ ಉತ್ಪಾದನೆ ಮಾಡಲಿರುವ ಮೊದಲ ಪಾಲಿಕೆ ಎಂಬ ಹೆಗ್ಗಳಿಕೆಗೆ ಹುಬ್ಬಳ್ಳಿ-ಧಾರವಾಡ ಪಾತ್ರವಾಗಲಿದೆ.

ಕೋಟ್‌...

ಒಣಕಸದಿಂದ ಟೊರ್ರಿಫೈಡ್‌ ಚಾರ್‌ಕೋಲ್‌ ಉತ್ಪಾದನೆಯ ಕೆಲಸ ಸದ್ಯ ಪ್ರಾಯೋಗಿಕವಾಗಿ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದ್ದು, ಒಣಕಸದ ಸಮಸ್ಯೆ ನಿವಾರಣೆಯಾಗಲಿದೆ.

- ಸಂತೋಷ ಯರಂಗಳಿ, ಪರಿಸರ ಅಭಿಯಂತರ, ಮಹಾನಗರ ಪಾಲಿಕೆ.