ಣೇಶೋತ್ಸವ ಸಮಿತಿಗಳು ಅನ್ನಪ್ರಸಾದದ ಮೂಲಕ ದಾಸೋಹದ ನಗರ ಎಂಬ ಹುಬ್ಬಳ್ಳಿಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ

ಹುಬ್ಬಳ್ಳಿ: ರಾಜ್ಯದ ಜನರ ಕಣ್ಮನ ಸೆಳೆಯುವ ರೀತಿಯಲ್ಲಿ ಹುಬ್ಬಳ್ಳಿ ಗಣೇಶೋತ್ಸವ ಆಚರಿಸಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ನಗರದ ಮೂರುಸಾವಿರ ಮಠದ ಸಭಾ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಶನ್ ಅಧ್ಯಕ್ಷ ಡಾ. ಜಿತೇಂದ್ರ ಮಜೇಥಿಯಾ ಮಾತನಾಡಿ, ನಗರದ ಎಲ್ಲ ಗಣೇಶೋತ್ಸವ ಸಮಿತಿಗಳು ಒಗ್ಗಟ್ಟಿನಿಂದ ಮಹಾಮಂಡಳಕ್ಕೆ ಶಕ್ತಿ ತುಂಬಿವೆ. ಮಹಾಮಂಡಳದ ನಿರಂತರ ಸೇವೆಯಿಂದ ಗಣೇಶೋತ್ಸವ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ ಎಂದರು.

ಉದ್ದಿಮೆದಾರ ಶ್ರೀನಿವಾಸ ಏಕಬೋಟೆ ಮಾತನಾಡಿ, ಗಣೇಶೋತ್ಸವ ಸಮಿತಿಗಳು ಅನ್ನಪ್ರಸಾದದ ಮೂಲಕ ದಾಸೋಹದ ನಗರ ಎಂಬ ಹುಬ್ಬಳ್ಳಿಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದರು.

ಹಿರಿಯ ಸಮಾಜಸೇವಕ ಶ್ರೀನಿವಾಸ ಬೋಚಗೇರಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಹಬ್ಬವಾಗಿ ಗಣೇಶೋತ್ಸವ ರೂಪುಗೊಂಡಿದೆ ಎಂದರು.

ಮಹಾಮಂಡಳದ ಉಪಾಧ್ಯಕ್ಷ ಅಲ್ತಾಫ ಕಿತ್ತೂರ ಮಾತನಾಡಿ, ಗಣೇಶ ವಿಸರ್ಜನೆಗೆ ನಗರದ ಎಲ್ಲ ಬಾವಿಗಳ ಸಿದ್ಧತೆ ಪೂರ್ಣಗೊಳ್ಳುತ್ತಿದೆ. ಉತ್ಸವಕ್ಕೆ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಶಾಂತರಾಜ ಪೋಳ ಮಾತನಾಡಿ, ಗಣೇಶೋತ್ಸವ ಸಮಿತಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂತಹ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆ ಹಾಗೂ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತವೆ ಎಂದರು.

ವಿಸರ್ಜನೆ ದಿನಾಂಕ ನಿಗದಿ:

ಸೆ. 14ರಂದು ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ, ಸೆ. 18ರಂದು 5ನೇ ದಿನ, ಸೆ. 20ರಂದು 7ನೇ ದಿನ, ಸೆ. 22ರಂದು 9ನೇ ದಿನ ಹಾಗೂ ಸೆ. 25ರಂದು 12ನೇ ದಿನದ ಗಣೇಶ ವಿಗ್ರಹಗಳ ವಿಸರ್ಜನೆ ನಡೆಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮೇಲ್ಸೇತುವೆ, ರಸ್ತೆಗಳ ಸುಧಾರಣೆ, ರಸ್ತೆಗೆ ಅಡೆತಡೆ ಉಂಟುಮಾಡುವ ಮರದ ರೆಂಬೆ- ಕೊಂಬೆಗಳ ತೆರವು, ಬಡಾವಣೆಗಳಲ್ಲಿ ಕೃತಕ ಬಾವಿಗಳ ವ್ಯವಸ್ಥೆ, ವಿದ್ಯುತ್ ಅವಘಡ ತಡೆ, ತ್ಯಾಜ್ಯ ವಿಲೇವಾರಿ, ನಿರಂತರ ನೀರು ಪೂರೈಕೆ ಹಾಗೂ ಸಾರಿಗೆ ನಿಯಂತ್ರಣ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಮಹಿಳಾ ಮುಖ್ಯಸ್ಥೆ ಅನಿತಾ ಜಡಿ ಹಾಗೂ ಕಾರ್ಯದರ್ಶಿ ಎಸ್.ಎಸ್. ಕಮಡೊಳ್ಳಿಶೆಟ್ಟರ್, ಐ.ಬಿ. ಬೀರೊಳ್ಳಿ, ಮೋಹನ ಪತ್ತಾರ, ಪಾಂಡುರಂಗ ಮೆಹರವಾಡೆ, ಮಹೇಶ ಶೇಟ್, ಭೀಮಾಶಂಕರ ಹಿರೇಮಠ, ಎಂ.ಎಸ್. ಶಿರಗಣ್ಣವರ ಸೇರಿದಂತೆ ಹಲವರು ಪಾಲ್ಗೊಂಡರು. ಸಂತೋಷ ಕಟ್ಟಿ ಪ್ರಾರ್ಥಿಸಿದರು. ಶಾಂತರಾಜ ಪೋಳ ಸ್ವಾಗತಿಸಿದರು. ಅಮರೇಶ ಹಿಪ್ಪರಗಿ ನಿರೂಪಿಸಿದರು. ಸರೋಜಾ ಛಬ್ಬಿ ವಂದಿಸಿದರು.