ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ

| Published : Aug 19 2025, 01:00 AM IST

ಸಾರಾಂಶ

ನಿರಂತರ ಸುರಿಯುವ ಮಳೆಯಿಂದ ನಗರದ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಮಲೆನಾಡಿನ ವಾತಾವರಣ ಸೃಷ್ಟಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹೊಲಗಳಲ್ಲಿ ನೀರು ನಿಂತ ಪರಿಣಾಮ ಕೃಷಿ ಚಟುವಟಿಕೆಗಳೆಲ್ಲ ಬಂದ್‌ ಆಗಿವೆ.

ಕಳೆದ ಒಂದು ವಾರದಿಂದ ವರುಣನ ಅಬ್ಬರ ಜೋರಾಗಿದೆ. ಇಷ್ಟು ದಿನ ಆಗಾಗ ಸುರಿಯುತ್ತಿದ್ದ ಮಳೆರಾಯ, ಭಾನುವಾರದಿಂದ ನಿರಂತರವಾಗಿ ಜಿಟಿ ಜಿಟಿಯಾಗಿ ಹನಿಯುತ್ತಿದ್ದಾನೆ. ಜನರು ಮನೆಯಿಂದ ಹೊರಬರಲಲು ಹಿಂದೇಟು ಹಾಕುವಂತಾಗಿದೆ. ವಿವಿಧ ಕೆಲಸ ಕಾರ್ಯಕ್ಕೆ ಸರ್ಕಾರಿ ಕಚೇರಿಗಳಿಗೆ ಹಾಗೂ ಸಂತೆಗೆ ಹೋಗಬೇಕೆನ್ನುವರು ಮಳೆ ಉಪಟಳದಿಂದ ಬೇಸತ್ತು ಕೆಲವರು ಮನೆಯಲ್ಲೇ ಉಳಿಯುವಂತಾಗಿದ್ದರೆ, ಕೆಲವರು ಅನಿವಾರ್ಯ ಕೆಲಸದಿಂದ ಮಳೆ ಲೆಕ್ಕಿಸದೇ ಛತ್ರಿ, ಜರ್ಕಿನ್‌, ರೇನ್ಕೋಟ್ ಹಾಕಿಕೊಂಡು ಜನರು ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಿರಂತರ ಸುರಿಯುವ ಮಳೆಯಿಂದ ನಗರದ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ. ರಾಣಿ ಚೆನ್ನಮ್ಮ ವೃತ್ತ, ಮಹಾನಗರ ಪಾಲಿಕೆ ಎದುರು, ಸಿಬಿಟಿ ಸುತ್ತಮುತ್ತ, ಹೊಸುರ ಕ್ರಾಸ್‌, ವಿದ್ಯಾನಗರ ರಸ್ತೆ, ಇಂಡಿಪಂಪ್‌, ಬನ್ನಿಗಿಡ, ರೈಲ್ವೆ ನಿಲ್ದಾಣದ ಎದುರು ಸೇರಿದಂತೆ ವಿವಿಧೆಡೆ ಮಳೆಯಿಂದ ಸಂಚಾರ ದಟ್ಟಣೆ ಸಮಸ್ಯೆ ನಿರ್ಮಾಣವಾಗಿತ್ತು.

ವಿವಿಧ ಕೆಲಸಕ್ಕಾಗಿ ಗ್ರಾಮೀಣ ಭಾಗದಿಂದ ಬರುವ ಜನರು ಮಳೆಯ ನೆನೆದುಕೊಂಡು ಓಡಾಡುವುದು ಕಂಡುಬಂತು.ಎಲ್ಲಿ ನೋಡಿದರೂ ಮಳೆ ನೀರು ಕಾಣಿಸುತ್ತಿದೆ. ಮಳೆ ಕಾರಣದಿಂದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಜನತಾ ಬಜಾರ ಹಾಗೂ ದುರ್ಗದಬೈಲ್‌ಗಳಲ್ಲಿ ಬೆರಳೆಣಿಕೆ ವ್ಯಾಪಾರಿಗಳು ಮಾತ್ರ ಛತ್ರಿ ಆಸರೆಯಲ್ಲಿ ಹೂವು, ಹಣ್ಣು ಮಾರಾಟದಲ್ಲಿ ತೊಡಗಿರುವುದು ಕಂಡುಬಂತು. ವ್ಯಾಪಾರ ವಹಿವಾಟು ಆಗದ ಕಾರಣ ಸಪ್ಪೆ ಮುಖದಲ್ಲಿ ಕುಳಿತಿದ್ದರು. ಮಳೆ ಸುರಿಯುತ್ತಿರುವುದರಿಂದ ರಸ್ತೆಗಳಲ್ಲಿ ಜಲಾವೃತವಾಗಿದ್ದವು.

ಅತ್ತ ನವಲಗುಂದ, ಕುಂದಗೋಳ ತಾಲೂಕುಗಳಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ತುಪರಿಹಳ್ಳ-ಬೆಣ್ಣಿಹಳ್ಳಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೊಲಗಳೆಲ್ಲ ಜಲಾವೃತವಾಗಿದ್ದು, ಕೃಷಿಚಟುವಟಿಕೆಗಳೆಲ್ಲ ಬಂದ್‌ ಆಗಿವೆ.