ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಪ್ಯಾರಾ ಶೂಟರ್ ರಾಕೇಶ್ ನಿಡಗುಂದಿ ದಕ್ಷಿಣ ಕೋರಿಯಾದ ಚಾಂಗ್ವಾನ್‌ನಲ್ಲಿ ಸೆಪ್ಟೆಂಬರ್ 7ರಿಂದ 16ರ ವರೆಗೆ ನಡೆಯಲಿರುವ ವಿಶ್ವ ಪ್ಯಾರಾ ಶೂಟಿಂಗ್ (ಡಬ್ಲ್ಯೂಎಸ್‌ಪಿಎಸ್) ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದು, ಒಲಿಂಪಿಕ್ಸ್ ಅರ್ಹತೆಯ ಕನಸಿನತ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
2024ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ನ್ಯಾಷನಲ್ ಸೆಂಟರ್ಸ್ ಆಫ್ ಎಕ್ಸ್‌ಲೆನ್ಸ್ (ಎನ್‌ಸಿಒಇ) ಯೋಜನೆಗೆ ಆಯ್ಕೆಯಾಗಿದ್ದಾರೆ. ಈಗಾಗಲೇ 2 ವಿಶ್ವಕಪ್ ಪ್ಯಾರಾ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದು, ಚಾಂಗ್ವಾನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ.ಗ್ರಾಮೀಣ ಪ್ರತಿಭೆ:
ಸಾಮಾನ್ಯ ಕೃಷಿಕ ಕುಟುಂಬದಲ್ಲಿ 1988ರಲ್ಲಿ ಜನಿಸಿದ ರಾಕೇಶ್ ಬಾಲ್ಯದಲ್ಲೇ ಪೋಲಿಯೋದಿಂದ ದೈಹಿಕ ಸವಾಲು ಎದುರಿಸಿದವರು. ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (ಬಿಎಫ್‌ಎ) ಪದವಿ ಪಡೆದ ರಾಕೇಶ್, ಕೆಲ ವರ್ಷಗಳ ಕಾಲ ಫೋಟೋ ಸ್ಟುಡಿಯೋ ನಡೆಸುತ್ತಿದ್ದರು. ಕೋವಿಡ್-19 ಸಂದರ್ಭದಲ್ಲಿ ಸ್ಟುಡಿಯೋ ಮುಚ್ಚಬೇಕಾದ ಪರಿಸ್ಥಿತಿ ಎದುರಾದ ಬಳಿಕ ಜೀವನದ ಹೊಸ ದಾರಿ ಹುಡುಕಿದ ಅವರು ಶೂಟಿಂಗ್ ಕ್ರೀಡೆಯತ್ತ ಮುಖ ಮಾಡಿದರು. ರಾಕೇಶ್ ಇದುವರೆಗೆ 33 ಪದಕ ತಮ್ಮದಾಗಿಸಿಕೊಂಡಿದ್ದು, ಅದರಲ್ಲಿ 14 ಚಿನ್ನ, 10 ಬೆಳ್ಳಿ ಹಾಗೂ 9 ಕಂಚಿನ ಪದಕಗಳಿವೆ. 2025ರಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಶೂಟರ್ ಜ್ಯೋತಿ ಸನ್ನಕ್ಕಿ ಅವರನ್ನು ರಾಕೇಶ್ ವಿವಾಹವಾಗಿದ್ದಾರೆ.
2019ರಲ್ಲಿ ಹುಬ್ಬಳ್ಳಿಯ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯಲ್ಲಿ ಕೋಚ್ ರವಿಚಂದ್ರ ಬಾಳೆಹೊಸೂರು ಅವರ ಮಾರ್ಗದರ್ಶನದಲ್ಲಿ ತರಬೇತಿ ಆರಂಭಿಸಿದ ಅವರು, ಪ್ರಸ್ತುತ ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಜೆ.ಪಿ. ನೌಟಿಯಾಲ್ ಹಾಗೂ ಕೋಚ್ ಜೀವನ್ ರೈ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತೀಚೆಗೆ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದು, ರಾಜ್ಯ ಸರ್ಕಾರದ ''''''''''''''''ಟಾರ್ಗೆಟ್ ಒಲಿಂಪಿಕ್ ಮೆಡಲ್'''''''''''''''' ಯೋಜನೆಯಡಿ ವಾರ್ಷಿಕ ₹10 ಲಕ್ಷ ನೆರವು ದೊರೆತಿರುವುದು ವಿಶೇಷ.
ದೇಶಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದೇ ನನ್ನ ಅಂತಿಮ ಗುರಿಯಾಗಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ.ರಾಕೇಶ್ ನಿಡಗುಂದಿ, ಪ್ಯಾರಾ ಶೂಟರ್