ಹುಬ್ಬಳ್ಳಿ ವೀರಶೈವ ಲಿಂಗಾಯತ ಸಮಾವೇಶ ಸಂಪೂರ್ಣ ವಿಫಲ

| Published : Sep 22 2025, 01:01 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ವೀರಶೈವ -ಲಿಂಗಾಯತ ಏಕತಾ ಸಮಾವೇಶ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳು ಹೇಳಿದರು.

​ಗದಗ: ಹುಬ್ಬಳ್ಳಿಯಲ್ಲಿ ನಡೆದ ವೀರಶೈವ -ಲಿಂಗಾಯತ ಏಕತಾ ಸಮಾವೇಶ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳು ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಾವೇಶ ಕೇವಲ ಬೇಡಜಂಗಮರ ಸಮಾವೇಶವಾಗಿದ್ದು, ಪಂಚಮಸಾಲಿ ಸಮುದಾಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು ಯಾವ ಕಾರಣಕ್ಕಾಗಿ ಮಾಡುತ್ತಿದ್ದೇವೆ ಎನ್ನುವ ಸ್ಪಷ್ಟತೆಯೇ ಅವರಿಗೆ ಇರಲಿಲ್ಲ ಎಂದು ವ್ಯಂಗ್ಯವಾಡಿದರು.​

​ಸಮಾವೇಶಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡಿ ಪ್ರಚಾರ ಮಾಡಿದ್ದರೂ, ಏಳರಿಂದ ಎಂಟು ಸಾವಿರ ಜನರು ಮಾತ್ರ ಭಾಗವಹಿಸಿದ್ದರು. ಸಾರ್ವಜನಿಕರ ಸ್ಪಂದನೆ ಇರಲಿಲ್ಲ. ವೇದಿಕೆಯ ಮೇಲಿದ್ದವರು ಕೆಲವು ಸ್ವಾಮೀಜಿಗಳನ್ನು ಹೊರತುಪಡಿಸಿದರೆ ಯಾರೂ ಪ್ರಮುಖರು ಇರಲಿಲ್ಲ ಎಂದರು.

​ಯಾವುದೇ ಸ್ಪಷ್ಟ ಸಂದೇಶವಿಲ್ಲ: ​ಹುಬ್ಬಳ್ಳಿ ಸಮಾವೇಶದಲ್ಲಿ ಯಾವುದೇ ಸ್ಪಷ್ಟ ಸಂದೇಶ ಅಥವಾ ಗುರಿ ಇರಲಿಲ್ಲ. ಯಾವ ಉದ್ದೇಶಕ್ಕಾಗಿ ಈ ಸಮಾವೇಶ ನಡೆಸಲಾಯಿತು ಎಂಬುದು ಜನರಿಗೆ ಅರ್ಥವಾಗಲಿಲ್ಲ. ಈ ಕಾರಣದಿಂದಲೇ ಇದು ಸಂಪೂರ್ಣವಾಗಿ ವಿಫಲವಾಗಿದೆ. ಇದು ಕೇವಲ ಪ್ರಾಥಮಿಕ ಹಂತ, ಮುಂದೆ ಇದಕ್ಕಿಂತ ದೊಡ್ಡದಾಗಿ ನಡೆಸುವುದಾಗಿ ಹೇಳುತ್ತಿದ್ದಾರೆ. ಅದು ಯಾವ ಉದ್ದೇಶಕ್ಕಾಗಿ ಎನ್ನುವುದು ಸ್ಪಷ್ಟತೆ ಇಲ್ಲ ಎಂದು ಶ್ರೀಗಳು ವಿಶ್ಲೇಷಿಸಿದರು.

ಭಕ್ತರಿಗೆ ಧನ್ಯವಾದ: ​ನಾನು ಮತ್ತು ಕೂಡಲಸಂಗಮ ಸ್ವಾಮೀಜಿ ಹುಬ್ಬಳ್ಳಿ ಸಮಾವೇಶಕ್ಕೆ ಹೋಗದಂತೆ ಭಕ್ತರಿಗೆ ಸೂಚನೆ ನೀಡಿದ್ದೆವು. ನಮ್ಮ ಸೂಚನೆಯನ್ನು ಪಾಲಿಸಿದ ನಮ್ಮ ಭಕ್ತರಿಗೆ ಧನ್ಯವಾದಗಳು. ಈ ಮೂಲಕ, ಸಮಾವೇಶದ ವೈಫಲ್ಯಕ್ಕೆ ಜನಸ್ಪಂದನೆಯ ಕೊರತೆಯೇ ಮುಖ್ಯ ಕಾರಣ ಎಂದು ಶ್ರೀಗಳು ಪುನರುಚ್ಚರಿಸಿದರು.

ಹುಬ್ಬಳ್ಳಿ ಸಮಾವೇಶಕ್ಕೆ ಹೋಲಿಕೆ ಮಾಡಿದಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಯಾತ್ರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಈ ಅಭಿಯಾನವು ರಾಜ್ಯದ 20 ಜಿಲ್ಲೆಗಳಲ್ಲಿ ಉತ್ತಮವಾಗಿಯೇ ನಡೆಯುತ್ತಿದೆ. ಸಾವಿರಾರು ಜನರು ಭಾಗವಹಿಸುತ್ತಿದ್ದಾರೆ. ಯಾತ್ರೆಯು ಯಶಸ್ವಿಯಾಗಲು ಜನರ ಸಹಕಾರವೇ ಕಾರಣ ಎಂದು ವಚನಾನಂದ ಶ್ರೀಗಳು ಹೇಳಿದರು.