ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ನಂ. 52 ದ್ವಿಪಥದಿಂದ ಚತುಷ್ಪಥವಾಗಿ ಪರಿವರ್ತನೆಗೆ ಕಾಲ ಸನ್ನಿಹಿತವಾಗಿದೆ. ಈ ಸಂಬಂಧ ಡಿಪಿಆರ್‌ (ವಿಸ್ತೃತಾ ಯೋಜನಾ ವರದಿ) ಸಿದ್ಧಪಡಿಸಿ ಸಲ್ಲಿಸುವಂತೆ ಕೇಂದ್ರ ಸರ್ಕಾರವೂ ಸೂಚಿಸಿದೆ. ಅದರಂತೆ ಡಿಪಿಆರ್‌ ಸಿದ್ಧತೆ ನಡೆದಿದ್ದು ಈ ಹೆದ್ದಾರಿ ಚತುಷ್ಪಥವಾದರೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಉತ್ತರ ಕರ್ನಾಟಕದ ಪ್ರಮುಖ ಹೆದ್ದಾರಿಗಳ ಪೈಕಿ ಹುಬ್ಬಳ್ಳಿ-ಸೊಲ್ಲಾಪುರ ಒಂದು. ನಿತ್ಯ ಲಕ್ಷಾಂತರ ವಾಹನಗಳು ಈ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ದ್ವಿಪಥವಾಗಿರುವ ಈ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಿಂದ ಅಪಘಾತಗಳ ಪ್ರಮಾಣವೂ ಹೆಚ್ಚಿದೆ. ಆದಕಾರಣ ಹೆದ್ದಾರಿಯನ್ನು ಚತುಷ್ಪಥ ಮಾಡಬೇಕು ಎಂಬ ಬೇಡಿಕೆ ಬಹುವರ್ಷದ್ದು. ಇದಕ್ಕಾಗಿ ಸಾಕಷ್ಟು ಹೋರಾಟಗಳು ನಡೆದಿದ್ದವು. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದರಾದ ಪಿ.ಸಿ. ಗದ್ದಿಗೌಡರ, ಬಸವರಾಜ ಬೊಮ್ಮಾಯಿ, ರಮೇಶ ಜಿಗಜಿಣಗಿ ಸೇರಿದಂತೆ ಎಲ್ಲರೂ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಡಿಪಿಆರ್‌ ಸಲ್ಲಿಸುವಂತೆ ಸೂಚಿಸಿದ್ದು ಡಿಪಿಆರ್‌ ಸಿದ್ಧಪಡಿಸಲು ಟೆಂಡರ್‌ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಷ್ಟು ಉದ್ಧ:

ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಯ ಅಂತರ 296 ಕಿಮೀ. ಈ ಪೈಕಿ ಸೊಲ್ಲಾಪುರದಿಂದ ವಿಜಯಪುರದ ವರೆಗೆ 110 ಕಿಮೀ ಚತುಷ್ಪಥವಾಗಿದೆ. ಇನ್ನುಳಿದಂತೆ ಧಾರವಾಡ, ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ 186 ಕಿಮೀ ಹೆದ್ದಾರಿ ಚತುಷ್ಪಥವಾಗಬೇಕಿದೆ. ಹುಬ್ಬಳ್ಳಿ, ನವಲಗುಂದ, ನರಗುಂದ, ಕೊಣ್ಣೂರು, ಕುಳಗೇರಿ, ಕೆರೂರು, ಗದ್ದನಕೇರಿ, ಬೀಳಗಿ, ಕೊರ್ತಿ, ಕೊಲ್ಹಾರ ಮೂಲಕ ಉತ್ತರ ಕರ್ನಾಟಕವನ್ನು ದಕ್ಷಿಣ ಮಹಾರಾಷ್ಟ್ರದ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುತ್ತದೆ. ಇದು 2,317 ಕಿಮೀ ಉದ್ದದ (ರಾಷ್ಟ್ರೀಯ ಹೆದ್ದಾರಿ- ಎನ್ಎಚ್- 52) ಉತ್ತರ-ದಕ್ಷಿಣ ಕಾರಿಡಾರ್‌ನ ಪ್ರಮುಖ ಭಾಗವಾಗಿದೆ. ಇದೇ ಯೋಜನೆಯಡಿ ನರಗುಂದ, ನವಲಗುಂದ ಬೈಪಾಸ್‌ಗಳ ನಿರ್ಮಾಣವೂ ಸೇರಿದೆ.


ವಾಹನ ದಟ್ಟಣೆ ಎಷ್ಟಿದೆ?ಕೋವಿಡ್-19 ನಂತರ ಈ ಹೆದ್ದಾರಿಯಲ್ಲಿ ವಾಹನಗಳ ಸಂಚಾರವು ಗಮನಾರ್ಹವಾಗಿ ಹೆಚ್ಚಾಗಿದೆ. 2023ರ ಟ್ರಾಫಿಕ್ ಗಣನೆ ಪ್ರಕಾರ ಬೀಳಗಿ ಕ್ರಾಸ್‌ನಲ್ಲಿ 35,663, ಗದ್ದನಕೇರಿ-74,878, ಕೆರೂರು-29,029, ಕುಳಗೇರಿ ಕ್ರಾಸ್-52,648 ಮತ್ತು ನರಗುಂದ-36,998 ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿದ್ದವು. 2024ರ ಜನವರಿ ವರದಿ ಪ್ರಕಾರ, ಈ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳ ಕಂಡು ಬಂದಿದೆ. ಬೀಳಗಿ-35,786, ಗದ್ದನಕೇರಿ-82,691, ಕೆರೂರು- 35,796, ಕುಳಗೇರಿ ಕ್ರಾಸ್-57,412 ಮತ್ತು ನರಗುಂದ- 44,240 ವಾಹನಗಳು ದಿನನಿತ್ಯ ಸಂಚರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಹೆದ್ದಾರಿ ಮೂಲ ಸೌಕರ್ಯವನ್ನು ಸುಧಾರಿಸಲು ಎನ್ಎಚ್ಎಐ ಚತುಷ್ಪಥ ರಸ್ತೆ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿದೆ. ದ್ವಿಪಥ ರಸ್ತೆ ನಿರ್ಮಾಣವು ವಾಹನ ಸಂಚಾರದ ತೀವ್ರತೆ ಕಡಿಮೆ ಮಾಡುವುದರೊಂದಿಗೆ, ಪ್ರಯಾಣದ ಸಮಯವನ್ನು ಇಳಿಸಲಿದೆ. ರಸ್ತೆಯ ಸುರಕ್ಷತೆ ಹೆಚ್ಚಿಸುವುದು ಮತ್ತು ವ್ಯಾಪಾರ-ವಹಿವಾಟು ಚಟುವಟಿಕೆಯನ್ನು ಸುಗಮಗೊಳಿಸುವುದಕ್ಕೆ ಸಹಾಯ ಮಾಡುತ್ತದೆ.

ಈ ಯೋಜನೆಯಿಂದ ಉತ್ತರ ಕರ್ನಾಟಕದ 4 ಜಿಲ್ಲೆಗಳ ಹಲವು ತಾಲೂಕುಗಳಿಗೆ ಅನುಕೂಲವಾಗಲಿದೆ. ರಾಜ್ಯಗಳ ನಡುವಿನ ಸಂಪರ್ಕದ ದೃಷ್ಟಿಯಿಂದ ಪ್ರಮುಖ ಮಾರ್ಗವಾಗಿ ಹೊರಹೊಮ್ಮಲಿರುವುದಂತೂ ಸತ್ಯ.