ರಾಣಿಬೆನ್ನೂರು: ಬಂಗಾರದ ಅಂಗಡಿಯಲ್ಲಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಹುಬ್ಬಳ್ಳಿ ಮಹಿಳೆಯನ್ನು ಇತ್ತೀಚಿಗೆ ಶಹರ ಪೊಲೀಸರು ಕದ್ದ ಮಾಲು ಸಮೇತ ಬಂಧಿಸಿದ್ದಾರೆ. ಪ್ರಕರಣದ ಹಿನ್ನೆಲೆ: ನಗರದ ಬೆನಕ ಗೋಲ್ಡ್ ಪ್ರೈವೆಟ್ ಅಮಿಟೆಡ್ ಕಚೇರಿಯಲ್ಲಿ ಫೆ. 18ರಂದು ಮಧ್ಯಾಹ್ನ 3ರಿಂದ 4.30ರ ಅವಧಿಯಲ್ಲಿ ಮಹಿಳೆಯೊಬ್ಬಳು ಬಂಗಾರದ ತಾಳಿ ಸರವನ್ನು ಗಿರವಿ ಇಡಲು ಬಂದಿದ್ದಳು. ಆದರೆ ಆಕೆಯು ಅದಕ್ಕೆ ಸಂಬಂಧಿಸಿದ ಯಾವುದೇ ರೀತಿಯ ದಾಖಲಾತಿಗಳನ್ನು ಹಾಜರ ಪಡಿಸಿರಲಿಲ್ಲ. ಇದರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಹರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಿರವಿ ಇಡಲು ಬಂದಿದ್ದ ಮಹಿಳೆಯನ್ನು ವಿಚಾರಿಸಿದಾಗ ತಾನು ಹುಬ್ಬಳ್ಳಿ ಶೆಟ್ಟರ ಕಾಲೋನಿ ಬನಶ್ರೀ ಲೇ ಔಟ್ ನಿವಾಸಿ, ಹೆಸರು ಶ್ರೀದೇವಿ ಕೋಂ ಸಂಜೀವ ಕಟ್ಟೆಕಾರ (31) ಎಂದು ತಿಳಿಸಿದಳು. ಆಕೆಯ ಹೇಳಿಕೆಯ ಬಗ್ಗೆ ಸಂಶಯಗೊಂಡ ಪೊಲೀಸರು ಆಕೆಯನ್ನು ಆಕೆಯ ಬಳಿಯಿದ್ದ ಬಂಗಾರದ ತಾಳಿ ಸರದೊಂದಿಗೆ ಠಾಣೆಗೆ ಕರೆತಂದು ಮತ್ತಷ್ಟು ವಿಚಾರಣೆಗೆ ಒಳಪಡಿಸಿದರು. ಆಗ ಆಕೆಯು ಫೆ.18ರಂದು ಶಿವಮೊಗ್ಗದ ಭೀಮಾ ಜ್ಯುವೇಲರ್ಸ್ ಶೋ ರೂಮಿನಲ್ಲಿ ಚಿನ್ನಾಭರಣ ಖರೀದಿ ನೆಪದಲ್ಲಿ 40.600 ಗ್ರಾಂ ತೂಕದ ತಾಳಿ ಸರ ಕಳ್ಳತನ ಮಾಡಿದ್ದು ಅದನ್ನೇ ಇಲ್ಲಿ ಒತ್ತೆ ಇಡಲು ಬಂದಿದ್ದೇನು. ಇದಲ್ಲದೆ ಫೆ.17ರಂದು ಬೆಳಗಾವಿ ಭೀಮಾ ಜ್ಯುವೇಲರ್ಸ್ ಶೋ ರೂಮಿನಲ್ಲಿ 41 ಗ್ರಾಂ ತೂಕದ ಬಂಗಾರದ ಸರ ಕಳುವು ಮಾಡಿ ಅಲ್ಲಿನ ಮಣಪುರಂ ಗೋಲ್ಡ್ ಪ್ರೈವೇಟ್ ಲಿ.ನಲ್ಲಿ ಒತ್ತೆ ಇಟ್ಟಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಪೊಲೀಸರು ಆಕೆ ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪತ್ತೆಗಾಗಿ ಎಸ್‌ಪಿ ಯಶೋದ ವಂಟಗೋಡಿ, ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿಎಸ್‌ಪಿ ಲೋಕೇಶ ಮಾರ್ಗದರ್ಶನದಲ್ಲಿ ಶಹರ ಸಿಪಿಐ ವೆಂಕಟೇಶ ಎನ್. ನೇತೃತ್ವದಲ್ಲಿ ಪಿಎಸ್‌ಐಗಳಾದ ಪರಮೇಶ ಡಿ. ಜಿ., ಎಚ್.ಎನ್. ದೊಡ್ಡಮನಿ, ಎಎಸ್‌ಐಗಳಾದ ಬಿ.ಎಸ್.ಮಡ್ಡೇರ, ರಾಘವೇಂದ್ರ ಪಿ.ಬಿ., ಶಹರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಿ.ಕೆ. ಸನದಿ, ಮಧು ಬೂಳ್ಳಾಪುರ, ಪಿ.ಕೆ. ಲಮಾಣಿ, ಮಂಜುನಾಥ ರೊಟ್ಟಿಯವರ, ಎಚ್.ಎಲ್.ದನವಿನಮನಿ, ಎಚ್.ಟಿ. ನಾಗಾವತ್, ಎಲ್.ಬಿ. ಕರಿಗಾರ, ಪಾರ್ವತಿ ಆಡಿನವರ, ಮೀನಾಕ್ಷಿ ಕೆ., ಎಂ.ಜಿ.ಮೇಲಗಿರಿ, ಚಾಲಕ ಶ್ರೀಕಾಂತ ಕೊರವರ ಮತ್ತು ತಾಂತ್ರಿಕ ಸಿಬ್ಬಂದಿಯವರನ್ನು ಒಳಗೊಂಡ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.ಕಾರ್ಯಾಚರಣೆ ನಡೆಸಿದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡಕ್ಕೆ ಎಸ್‌ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.