ಹುಬ್ಬಳ್ಳಿ ಧಾರವಾಡ ಬೈಪಾಸ್‌: ಮತ್ತೆ 49 ದಿನ ಟೋಲ್‌ ಕಟ್ಟಿ

| Published : Jun 02 2024, 01:46 AM IST

ಹುಬ್ಬಳ್ಳಿ ಧಾರವಾಡ ಬೈಪಾಸ್‌: ಮತ್ತೆ 49 ದಿನ ಟೋಲ್‌ ಕಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿನಿತ್ಯ ಸಾವಿರಾರು ವಾಹನಗಳು ಬೈಪಾಸ್‌ ಮೂಲಕ ಹಾಯ್ದು ಹೋಗುತ್ತವೆ. ಹೀಗಾಗಿ ಟೋಲ್‌ ಸಂಗ್ರಹದ ಮೊತ್ತ ಸರಿಸುಮಾರು ಪ್ರತಿದಿನವೂ ₹ 15ರಿಂದ ₹ 18 ಲಕ್ಷ ಗಳಷ್ಟಾಗುತ್ತದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರದ ಬೈಪಾಸ್‌ ಟೋಲ್‌ ಸಂಗ್ರಹದ ಅವಧಿ ಮೇ 30ಕ್ಕೆ ಮುಕ್ತಾಯವಾಗಿದೆ. ಇದೀಗ ಅದನ್ನು ಪುನಃ ವಿಸ್ತರಿಸಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿದೆ.

ನಗರ ಪ್ರದೇಶದಲ್ಲಿ ಹೆಚ್ಚಿನ ವಾಹನ ದಟ್ಟಣೆಯಾಗದಿರಲಿ, ಊರ ಹೊರಗೆ ಹೋಗುವ ವಾಹನಗಳೆಲ್ಲ ಹೊರಗಿನಿಂದಲೇ ಹೋಗುವಂತಾಗಲಿ ಎಂಬ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಮಧ್ಯೆ ಬೈಪಾಸ್‌ ಹೆದ್ದಾರಿ ಮಾಡಲಾಗಿದೆ. 31 ಕಿಮೀ ಅಂತರದ ಈ ಹೆದ್ದಾರಿಯನ್ನು ನಿರ್ಮಿಸಿದ್ದು 1998ರಲ್ಲಿ. ಅಲ್ಲಿಂದ 2024ರ ವರೆಗೆ ಇದರ ಅವಧಿಯಿತ್ತು. 2024ರ ಮೇ 30ಕ್ಕೆ ಇಲ್ಲಿನ ಟೋಲ್‌ ಸಂಗ್ರಹದ ಅವಧಿ ಮುಕ್ತಾಯವಾಗಿದೆ. ಇದೀಗ ಮತ್ತೆ 49 ದಿನ ಟೋಲ್‌ ಸಂಗ್ರಹ ಅವಧಿಯನ್ನು ವಿಸ್ತರಿಸಲಾಗಿದೆ.

ಎಷ್ಟಿದೆ ಸಂಗ್ರಹ:

ಪ್ರತಿನಿತ್ಯ ಸಾವಿರಾರು ವಾಹನಗಳು ಬೈಪಾಸ್‌ ಮೂಲಕ ಹಾಯ್ದು ಹೋಗುತ್ತವೆ. ಹೀಗಾಗಿ ಟೋಲ್‌ ಸಂಗ್ರಹದ ಮೊತ್ತ ಸರಿಸುಮಾರು ಪ್ರತಿದಿನವೂ ₹ 15ರಿಂದ ₹ 18 ಲಕ್ಷ ಗಳಷ್ಟಾಗುತ್ತದೆ. ಇನ್ನು ಭಾನುವಾರದಂದು ₹ 22 ಲಕ್ಷ ವರೆಗೂ ಟೋಲ್‌ ಸಂಗ್ರಹವಾಗುತ್ತದೆ ಎಂದು ಮೂಲಗಳು ತಿಳಿಸುತ್ತವೆ. ಬರೀ ₹ 18 ಲಕ್ಷದಂತೆ ಹಿಡಿದರೂ ಹಿಡಿದರೂ 49 ದಿನಗಳಿಗೆ ₹ 8.82 ಕೋಟಿ ಟೋಲ್‌ ಸಂಗ್ರಹವಾಗುತ್ತದೆ ಎಂದು ಹೇಳಲಾಗುತ್ತದೆ.

ಮತ್ತೇಕೆ ವಿಸ್ತರಣೆ:

ನಂದಿ ಹೈವೇ ಡವಲಪರ್ಸ್‌ ಲಿ. ಇದನ್ನು ನಿರ್ಮಿಸಿ ನಿರ್ವಹಿಸುತ್ತಾ ಬಂದಿದೆ. ಕೊರೋನಾ ವೇಳೆಯಲ್ಲಿ ಯಾವುದೇ ವಾಹನಗಳು ಓಡಾಡಲಿಲ್ಲ. ಹೀಗಾಗಿ ಆಗ ಟೋಲ್‌ ಸಂಗ್ರಹವೇ ಆಗಲಿಲ್ಲ. ಆಗ ಹಾನಿಯಾಗಿದೆ. ಇನ್ನು ನೋಟ್‌ ರದ್ದತಿ ವೇಳೆಯೂ ನಷ್ಟವಾಗಿದೆ. ಆದಕಾರಣ ಟೋಲ್‌ ಸಂಗ್ರಹದ ಅವಧಿ ವಿಸ್ತರಿಸುವಂತೆ ಕೋರಿ ಕಂಪನಿಯೂ ಅರ್ಜಿ ಸಲ್ಲಿಸಿತ್ತಂತೆ. ಅದರಂತೆ ಮುಂದಿನ 49 ದಿನ ಅವಧಿ ವಿಸ್ತರಿಸಿ ಆದೇಶಿಸಿದೆ.

ಆಕ್ರೋಶ:

ಅವಧಿ ವಿಸ್ತರಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು, ಕೊರೋನಾ ಸಮಯದಲ್ಲಿ ಸಂಗ್ರಹವಾಗಿಲ್ಲ ಎಂದು ಹೇಳುತ್ತಾರೆ. ಆಗ ಇಡೀ ದೇಶವೇ ಸಂಕಷ್ಟದಲ್ಲಿತ್ತು. ಜನತೆ ಹೊರಗೆ ಓಡಾಡುವಂತಿರಲಿಲ್ಲ. ಹೀಗಾಗಿ ಆಗ ಸಂಗ್ರಹವಾಗಿಲ್ಲ. ಲಾಸ್‌ ಆಗಿದೆ ಎಂದರೆ ಹೇಗೆ? ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಒಟ್ಟಿನಲ್ಲಿ ಬೈಪಾಸ್‌ ರಸ್ತೆಯಲ್ಲಿ ಟೋಲ್‌ ಸಂಗ್ರಹದ ಅವಧಿ ವಿಸ್ತರಿಸಿರುವುದಕ್ಕೆ ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿರುವುದಂತೂ ಸತ್ಯ.ಹೆದ್ದಾರಿ ನಿರ್ವಹಿಸುತ್ತಿರುವ ಸಂಸ್ಥೆಯು ವಿಸ್ತರಣೆಗೆ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಕೋವಿಡ್‌ ಹಾಗೂ ನೋಟ್‌ ರದ್ದತಿಯಿಂದ ನಷ್ಟವಾಗಿತ್ತು. ಅದನ್ನು ಸರಿದೂಗಿಸಲು ಅವಧಿ ವಿಸ್ತರಣೆಗೆ ಕೋರಿತ್ತು. ಅದರಂತೆ 49 ದಿನ ವಿಸ್ತರಣೆ ಮಾಡಿದೆ ಎಂದು ಎನ್‌ಎಚ್‌ಎಐ ಅಧೀಕ್ಷಕ ಅಭಿಯಂತರ ಶಿವಾನಂದ ನಾಯ್ಕ ಹೇಳಿದ್ದಾರೆ.