ಸಾರಾಂಶ
ಸರ್ಕಾರ ಈ ಕುಟುಂಬಕ್ಕೆ ಸರಿಯಾದ ಪರಿಹಾರ ಹಾಗೂ ಅಂಜಲಿಯ ಇನ್ನುಳಿದ ಸಹೋದರಿಯರಿಗೆ ಉಚಿತ ಶಿಕ್ಷಣ ನೀಡಬೇಕು. ಮುಂದಿನ ದಿನಮಾನಗಳಲ್ಲಾದರೂ ಸಮಾಜದ ಎಲ್ಲ ಬಾಂಧವರು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ.
ಹುಬ್ಬಳ್ಳಿ:
ಕರ್ನಾಟಕದಲ್ಲಿ ಅಂಜಲಿ ಹತ್ಯೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯಿಂದಾಗಿ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಂತಹ ಘಟನೆಗಳನ್ನು ನೋಡಿದರೆ ಹುಬ್ಬಳ್ಳಿಯು ಮತ್ತೊಂದು ಬಿಹಾರ ಎಂಬ ಅಪಕೀರ್ತಿ ಪಡೆಯಲಿದೆ ಎಂಬ ಆತಂಕ ಮೂಡಿದೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ವಿಷಾಧಿಸಿದರು.ಅವರು ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಇದ್ಯಾವುದು ಆದಂತೆ ಕಾಣುತ್ತಿಲ್ಲ. ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಂಜಲಿ ಸಾವು ನಮಗೆ ತೀವ್ರ ನೋವುಂಟು ಮಾಡಿದೆ. ರಾಜ್ಯದಲ್ಲಿ ಜನರು ಇಂತಹ ಘಟನೆಗಳಿಂದ ಭಯಭೀತರಾಗಿದ್ದಾರೆ. ಅಂಜಲಿ ಪ್ರಕರಣದಲ್ಲೂ ಸರ್ಕಾರ ತ್ವರಿತ ನ್ಯಾಯಾಲಯ ಸ್ಥಾಪಿಸಿ ಆರೋಪಿಗೆ ಕಠಿಣವಾದ ಶಿಕ್ಷೆ ಕೊಡಿಸಬೇಕು ಎಂದರು.ಸರ್ಕಾರ ಈ ಕುಟುಂಬಕ್ಕೆ ಸರಿಯಾದ ಪರಿಹಾರ ಹಾಗೂ ಅಂಜಲಿಯ ಇನ್ನುಳಿದ ಸಹೋದರಿಯರಿಗೆ ಉಚಿತ ಶಿಕ್ಷಣ ನೀಡಬೇಕು. ಮುಂದಿನ ದಿನಮಾನಗಳಲ್ಲಾದರೂ ಸಮಾಜದ ಎಲ್ಲ ಬಾಂಧವರು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ. ಅಂದಾಗ ಮಾತ್ರ ಇಂತಹ ಘಟನೆಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.
ಇದೇ ವೇಳೆ ಶ್ರೀಗಳು ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಿದರು.