ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಬರೋಬ್ಬರಿ 37 ವರ್ಷಗಳ ಬಳಿಕ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಹಿಂದೆ ಅಂದರೆ ಪ್ರಾಧಿಕಾರ ರಚನೆಯಾದಾಗ (1988) ಅದರ ವ್ಯಾಪ್ತಿ ಎಷ್ಟು ಎಂಬುದು ನಿರ್ಧಾರವಾಗಿತ್ತು. ಅದಾದ ಬಳಿಕ ಅದನ್ನು ವಿಸ್ತರಿಸಿರಲಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಡಾ ತನ್ನ ಸ್ಥಳೀಯ ಯೋಜನಾ ಪ್ರದೇಶದ (ಎಲ್‌ಪಿಎ- ಲೋಕಲ್‌ ಪ್ಲ್ಯಾನಿಂಗ್‌ ಏರಿಯಾ) ವ್ಯಾಪ್ತಿಯನ್ನು ವಿಸ್ತರಿಸಿಕೊಂಡು 46 ಹಳ್ಳಿ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ರೈತ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಿಡಿಒಗಳ ಸಭೆ ನಡೆಸಲು ಹುಡಾ ನಿರ್ಧರಿಸಿದ್ದು, ಈ ಮೂಲಕ ರೈತರಲ್ಲಿನ ಗೊಂದಲ ನಿವಾರಣೆಗೆ ಮುಂದಾಗಿದೆ.

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಬರೋಬ್ಬರಿ 37 ವರ್ಷಗಳ ಬಳಿಕ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಹಿಂದೆ ಅಂದರೆ ಪ್ರಾಧಿಕಾರ ರಚನೆಯಾದಾಗ (1988) ಅದರ ವ್ಯಾಪ್ತಿ ಎಷ್ಟು ಎಂಬುದು ನಿರ್ಧಾರವಾಗಿತ್ತು. ಅದಾದ ಬಳಿಕ ಅದನ್ನು ವಿಸ್ತರಿಸಿರಲಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಮುಂಚೆ 46 ಹಳ್ಳಿಗಳು ಬರುತ್ತಿದ್ದವು. ಹುಡಾದ ವ್ಯಾಪ್ತಿ 402.08 ಚದುರ ಕಿಮೀ ಇತ್ತು. ಇದೀಗ ಹೊಸ ಎಲ್‌ಪಿಎ ಪ್ರಕಾರ ಮತ್ತೆ 46 ಹಳ್ಳಿಗಳು ಸೇರ್ಪಡೆ ಮಾಡಿಕೊಂಡಿದೆ. ಹುಬ್ಬಳ್ಳಿ ತಾಲೂಕಿನ 13, ಕಲಘಟಗಿ ತಾಲೂಕಿನ 6, ಧಾರವಾಡ ತಾಲೂಕಿನ 27 ಸೇರಿದಂತೆ 46 ಹಳ್ಳಿಗಳು ಸೇರ್ಪಡೆಯಾಗಿವೆ. ಇದರಿಂದಾಗಿ ಹುಡಾ ವ್ಯಾಪ್ತಿಗೆ 92 ಹಳ್ಳಿಗಳು ಬಂದಂತಾಗಿದೆ. ಇದರ ವ್ಯಾಪ್ತಿಯೂ 402.08 ಚದುರ ಕಿಮೀನಿಂದ 757.54 ಚದುರ ಕಿಮೀ ಆಗಿದೆ. ಈ ಮೂಲಕ ದುಪ್ಪಟ್ಟು ಏರಿಯಾವನ್ನು ಹುಡಾ ಹೊಂದಿದಂತಾಗಿದೆ.

ರೈತರಲ್ಲಿ ಗೊಂದಲ:

ಹುಡಾ ತನ್ನ ವ್ಯಾಪ್ತಿಯನ್ನೇನೋ ವಿಸ್ತರಿಸಿಕೊಂಡಿತು. ಆದರೆ, ಇದಕ್ಕೆ ಆಸ್ತಿಕರ, ನೀರಿನ ಕರ ಸೇರಿದಂತೆ ಎಲ್ಲವೂ ಹೆಚ್ಚಳವಾಗುತ್ತದೆ. ತಮ್ಮ ಜಮೀನನ್ನು ಹುಡಾ ತೆಗೆದುಕೊಳ್ಳುತ್ತದೆ. ಕೃಷಿ ಮಾಡಲು ಕಷ್ಟವಾಗುತ್ತದೆ ಎಂಬೆಲ್ಲ ಗೊಂದಲ ರೈತರಲ್ಲಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ನಾಲ್ಕೈದು ಬಾರಿ ರೈತರು ಹುಡಾ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿದ್ದರೂ ಅವರಲ್ಲಿನ ಗೊಂದಲ ಮಾತ್ರ ಕಡಿಮೆಯಾಗುತ್ತಿಲ್ಲ. ಆದರೆ, ಹುಡಾ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿರುವುದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ. ಯಾರ ಭೂಮಿ ತೆಗೆದುಕೊಳ್ಳುವುದಿಲ್ಲ. ಜತೆಗೆ ಟ್ಯಾಕ್ಸ್‌ ಸೇರಿದಂತೆ ಯಾವುದೋ ಹೆಚ್ಚಾಗುವುದಿಲ್ಲ. ಕೃಷಿ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸುತ್ತಿದೆ.

ವ್ಯವಸ್ಥಿತ ನಗರ ಬೆಳವಣಿಗೆ:

ಸೇರ್ಪಡೆಗೊಂಡಿರುವ ಗ್ರಾಮಗಳಲ್ಲಿ ಯಾರಾದರೂ ಲೇಔಟ್‌ ಮಾಡಬೇಕೆಂದರೆ ಅದಕ್ಕೆ ಹುಡಾ ಅನುಮತಿ ಪಡೆಯಬೇಕು. ನಿಯಮಬದ್ಧವಾಗಿಯೇ ಮಾಡಬೇಕಾಗುತ್ತದೆ. ಇದರಿಂದ ನಿವೇಶನ ಮಾಡುವ ಬಿಲ್ಡರ್‌ಗಳಿಗೆ ಭೂಮಿ ಕೊಡುವ ರೈತರಿಗೆ ಅನುಕೂಲವೇ ಆಗುತ್ತದೆ. ಜತೆಗೆ ವ್ಯವಸ್ಥಿತ, ಸುಸಜ್ಜಿತ ನಿವೇಶನ ಮಾಡಬಹುದಾಗಿದೆ. ಜತೆಗೆ ನಗರದ ಹೊರವಲಯಗಳಲ್ಲಿ ಅವ್ಯವಸ್ಥಿತವಾಗಿ, ಅಕ್ರಮ ಲೇಔಟ್‌, ಫಾರ್ಮ್‌ ಹೌಸ್‌, ರೆಸಾರ್ಟ್‌ಗಳಿಗೆ ಕಡಿವಾಣ ಬೀಳುತ್ತದೆ. ನಗರದ ಸುತ್ತಮುತ್ತಲೂ ಅತ್ಯಂತ ವ್ಯವಸ್ಥಿತವಾಗಿ ಬೆಳವಣಿಗೆಯಾಗುತ್ತದೆ.

ಈ ಬಗ್ಗೆ ರೈತರಿಗೆ ತಿಳಿಸಿದರೂ ಅಷ್ಟೊಂದು ಮನವರಿಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಸೇರ್ಪಡೆಗೊಳ್ಳುತ್ತಿರುವ 46 ಹಳ್ಳಿಗಳ ಹಾಗೂ ಈ ಹಿಂದಿನ 46 ಹಳ್ಳಿಗಳ ವ್ಯಾಪ್ತಿಯ ಗ್ರಾಪಂಗಳ ಪಿಡಿಒಗಳ ಸಭೆ ನಡಿಸಿ ಪಿಡಿಒ ಹಾಗೂ ರೈತರಿಗೆ ಮನವರಿಕೆ ಮಾಡಿಕೊಡುವುದು ಹುಡಾ ಉದ್ದೇಶವಾಗಿದೆ. ಇದಕ್ಕಾಗಿ ಇನ್ನು ಎಂಟ್ಹತ್ತು ದಿನಗಳಲ್ಲಿ ಸಭೆ ನಡೆಸಲು ನಿರ್ಧರಿಸಿದೆ.

ಒಟ್ಟಿನಲ್ಲಿ ಹುಡಾ ತನ್ನ ಎಲ್‌ಪಿಎ ವಿಸ್ತರಿಸಿಕೊಂಡಿರುವುದಕ್ಕೆ ವ್ಯಕ್ತವಾಗಿರುವ ಆಕ್ಷೇಪವನ್ನು ತಣಿಸಲು ಹುಡಾ ಮುಂದಾಗಿರುವುದಂತೂ ಸತ್ಯ.

ಕಾರ್ಯಪಡೆ ರಚನೆ

ಈ ನಡುವೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಕ್ರಮ ಲೇಔಟ್‌ ತಡೆಯಲು ಜಿಲ್ಲಾಧಿಕಾರಿ, ಪಿಡಿಡಿಡಿಟಿ, ಪಾಲಿಕೆ ಮತ್ತು ಪೊಲೀಸ್‌ ಕಮಿಷನರೇಟ್‌, ಹುಡಾ ಅಧ್ಯಕ್ಷರು, ಆಯುಕ್ತರು ಸೇರಿ 15 ಜನರನ್ನೊಳಗೊಂಡ ಟಾಸ್ಕ್‌ ಪೋರ್ಸ್‌ ರಚಿಸಲು ಹುಡಾ ನಿರ್ಧರಿಸಿದೆ. ಈ ತಂಡ ಅಕ್ರಮವಾಗಿ ತಲೆ ಎತ್ತುತ್ತಿರುವ ಲೇಔಟ್‌, ರೆಸಾರ್ಟ್‌ಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅವುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಲಿದೆ.

ಹುಡಾ ತನ್ನ ಸ್ಥಳೀಯ ಯೋಜನಾ ಪ್ರದೇಶವನ್ನು ಬರೋಬ್ಬರಿ 37 ವರ್ಷಗಳ ಬಳಿಕ ವಿಸ್ತರಿಸಿಕೊಂಡಿದೆ. ಆದರೆ, ಈ ಬಗ್ಗೆ ರೈತರಲ್ಲಿ ಮೂಡಿರುವ ತಪ್ಪು ಕಲ್ಪನೆ, ಗೊಂದಲ ನಿವಾರಣೆಗೆ ಪಿಡಿಒಗಳ ಸಭೆ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ಅಕ್ರಮ ಲೇಔಟ್‌ ತಡೆಯಲು ಕಾರ್ಯಪಡೆ ರಚಿಸಲಾಗುವುದು.

ಶಾಕೀರ ಸನದಿ, ಅಧ್ಯಕ್ಷರು, ಹುಡಾ