ಇಂದಿನಿಂದ ಹುದಲಿ ಗ್ರಾಮದೇವಿ ಜಾತ್ರಾ ಮಹೋತ್ಸವ

| Published : May 14 2024, 01:11 AM IST

ಸಾರಾಂಶ

ಹುದಲಿ ಗ್ರಾಮ ದೇವಿಯ ಜಾತ್ರೆಯ ಜತೆಗೆ ಜಾನಪದ ಸಂಭ್ರಮ, ನಾನಾ ಸ್ಪರ್ಧೆಗಳು, ನಾಟಕಗಳ ಪ್ರದರ್ಶನ ಆಯೋಜನೆ

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ಪ್ರತಿ 11 ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಮೇ 14 ರಿಂದ 22 ರವರೆಗೆ ನಡೆಯಲಿದೆ. ಮೇ14 ರಂದು ಬೆಳಗ್ಗೆ 6ಕ್ಕೆ ಶ್ರೀದೇವಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಪೂಜೆ ನೆರವೇರಲಿದೆ.

ಬೆಳಗ್ಗೆ 8.15ಕ್ಕೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 9ಗಂಟೆಗೆ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 15 ರಂದು ಮಧ್ಯಾಹ್ನ 1.45ಕ್ಕೆ ಶ್ರೀದೇವಿಯ ಹೊನ್ನಾಟ ಬಳಿಕ ಮಧ್ಯಾಹ್ನ 4ಕ್ಕೆ ಅಂಕಲಗಿಯ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ ಹಾಗೂ ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ರಥೋತ್ಸವ ಚಾಲನೆ ನೀಡುವರು. ಬಳಿಕ ರಥೋತ್ಸವ ಪ್ರಾರಂಭವಾಗಿ ಸಂಜೆ 6ಕ್ಕೆ ಶ್ರೀ ರೇಣುಕಾದೇವಿ(ಯಲ್ಲಮ್ಮನ) ಗುಡಿಯ ಎದುರಿಗೆ ರಥದ ವಾಸ್ತವ್ಯ ಮಾಡಲಿದ್ದು, ರಾತ್ರಿ 10ಕ್ಕೆ ಧರ್ಮದ ನುಡಿ ಬೆಂಕಿಯ ಕಿಡಿ ನಾಟಕ ಪ್ರದರ್ಶನಗೊಳ್ಳಲಿದೆ.

ಮೇ.16 ರಂದು ಮಧ್ಯಾಹ್ನ 12.30ಕ್ಕೆ ರಥೋತ್ಸವ ಪ್ರಾರಂಭವಾಗಿ ಆಲದ ಗಿಡದ ಶ್ರೀ ಕರೆಮ್ಮ ದೇವಿಗೆ ದೈವಾಚಾರಿಯಿಂದ ಉಡಿ ತುಂಬಿ ಮತ್ತೆ ರಥೋತ್ಸವ ನಡೆಯಲಿದ್ದು, ಸಂಜೆ 6ಕ್ಕೆ ಜಿಡ್ಡಿಯಲ್ಲಿ ಮೂಲ ಪಾದಗಟ್ಟಿ ವಾಸ್ತವ್ಯ ಮಾಡಲಿದೆ. ರಾತ್ರಿ 10ಕ್ಕೆ ರಥದ ಹತ್ತಿರ ಸಂಗ್ಯಾಬಾಳ್ಯಾ ನಾಟಕ ಪ್ರದರ್ಶನವಾಗಲಿದೆ.

ಮೇ.17 ರಂದು ಮಧ್ಯಾಹ್ನ 12.15ಕ್ಕೆ ಪಾದಗಟ್ಟೆಯಿಂದ ರಥೋತ್ಸವ ಪ್ರಾರಂಭವಾಗಲಿದೆ. ಶ್ರೀ ದೇವಿಯ ಹೊನ್ನಾಟದ ನಂತರ ಶೃಂಗರಿಸಿದ ಭವ್ಯ ಮಂಟಪದಲ್ಲಿ ಶ್ರೀದೇವಿಯ ಪ್ರತಿಷ್ಠಾಪನೆಗೊಳಿಸುವುದು. ಚಚಡಿ ಕಲಾತಂಡದವರಿಂದ ರಾತ್ರಿ 10. ಗಂಟೆಗೆ ರೈತ ಚಲ್ಲಿದ ರಕ್ತ ನಾಟಕ ಪ್ರದರ್ಶನಗೊಳ್ಳಲಿದೆ. ಮೇ.18 ರಂದು ಬೆಳಗ್ಗೆ 9ಕ್ಕೆ ಕುದುರೆ ಶರ್ಯತ್ತುಗಳು (ರೌಂಡ್‌ ರೇಸ್ 5 ಕ್ಕಿಂತ ಹೆಚ್ಚು ಜೋಡಿಗಳು ಕೂಡಿದರೆ ಮಾತ್ರ) ಸಂಜೆ 5ಕ್ಕೆ ಶಿರಗುಪ್ಪಿಯ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಬ ತರಬೇತಿ ಕೇಂದ್ರದಿಂದ ನಡೆಯಲಿದ್ದು, ರಾತ್ರಿ 9ಕ್ಕೆ ಕೊಲ್ಲಾಪೂರ ತಂಡದಿಂದ ರಸಮಂಜರಿ ನಡೆಯಲಿದೆ. ಮೇ.19 ರಂದು ಬೆಳಗ್ಗೆ 9ಕ್ಕೆ ಜೋಡೆತ್ತಿನ ಖಾಲಿ ಭಂಡಿ ಶರ್ಯತ್ತುಗಳು, ಮಧ್ಯಾಹ್ನ 3ಕ್ಕೆ ಕುಸ್ತಿಗಳು ನಡೆಯಲಿವೆ. ರಾತ್ರಿ 9ಕ್ಕೆ ದಾವೂದ ತಾಳಿಕೋಟಿ ತಂಡದವರಿಂದ ಕಟಕ ರೊಟ್ಟಿ ಕಲ್ಲವ್ವ ನಾಟಕ ಪ್ರದರ್ಶನ. ಮೇ.20 ರಂದು ಬೆಳಗ್ಗೆ 9 ಗಂಟೆಗೆ ಸ್ಲೋ ಬೈಕ್ ಸ್ಪರ್ಧೆ, ಮ.3. ಗಂಟೆಯಿಂದ ಪ್ರಸಿದ್ಧ ಕುಸ್ತಿಪಟುಗಳಿಂದ ಜಂಗೀ ನಿಕಾಲಿ ಕುಸ್ತಿ ನಡೆಯಲಿವೆ.

ಮೇ.21 ರಂದು ಬೆಳಗ್ಗೆ 9 ಗಂಟೆಗೆ ಟೇಲರ್ ಸಹಿತ ಟ್ರ್ಯಾಕ್ಟರ್‌ ರಿವರ್ಸ್‌ ಓಡಿಸುವ ಸ್ಪರ್ಧೆ, ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಸವದತ್ತಿಯ ಶ್ರೀ ನಾಗಲಿಂಗ ಸಾಹಿತ್ಯ ಜಾಣಪದ ಕಲಾ ಪೋಷಕರ ಯುವ ಬಳಗ ಹಿರೇಬೂದನೂರ ಆಶ್ರಯದಲ್ಲಿ ಜಾನಪದ ಉತ್ಸವ ಹಾಗೂ ಬಯಲಾಟ ಸಂಭ್ರಮ, ಗೀ ಗೀ ಪದ, ಶ್ರೀ ನಿಜಗುಣ ಶಿವಯೋಗಿ ಪೌರಾನಿಕ ನಾಟಕ ಸೇರಿದಂತೆ ಸೋಬಾನಪದಗಳು ನಡೆಯಲಿವೆ. ಮೇ. 22 ರಂದು ಬೆಳಗ್ಗೆ 9 ಗಂಟೆಗೆ ವಿವಿಧ ಮಹನೀಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ. ಸಂಜೆ 4 ಗಂಟೆಯಿಂದ ದೇವಿಯ ಹೊನ್ನಾಟವು ಪ್ರಾರಂಭವಾಗಿ ಸಂಜೆಗೆ ಸಿಮೋಲಂಘನ ಮಾಡಿ ಜಾತ್ರೆಗೆ ಕೊನೆಗೊಳ್ಳಲಿದೆ ಎಂದು ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.