ಸಾರಾಂಶ
ಕಾರವಾರ: ಹಿಂದು ಫೈರ್ ಬ್ರಾಂಡ್, ಹಿಂದೂ ಹುಲಿ ಎಂದೆಲ್ಲ ಕರೆಸಿಕೊಂಡು ಸ್ವಯಂಕೃತಾಪರಾಧದಿಂದ ಲೋಕಸಭೆ ಟಿಕೆಟ್ ವಂಚಿತರಾದ ಅನಂತಕುಮಾರ ಹೆಗಡೆ ರಾಜಕೀಯವಾಗಿ ನೇಪಥ್ಯಕ್ಕೆ ಸರಿದು, ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಿ ಆಯ್ಕೆಯಾಗಿ ರಾಜಕೀಯ ಸಂಚಲನ ಸೃಷ್ಟಿಸಿದ ವರ್ಷ 2024.
ಉತ್ತರ ಕನ್ನಡ (ಹಿಂದಿನ ಕೆನರಾ) ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಗೆದ್ದು ಆನೆ ನಡೆದಿದ್ದೇ ದಾರಿ ಎಂದು ಅನಂತಕುಮಾರ ಹೆಗಡೆ ಮುನ್ನಡೆಯುತ್ತಿದ್ದರು. ಪಕ್ಷದ ಹೈಕಮಾಂಡಿಗೂ ಕ್ಯಾರೇ ಎನ್ನದೆ, ನರೇಂದ್ರ ಮೋದಿ ಅವರೇ ಕ್ಷೇತ್ರಕ್ಕೆ ಬಂದರೂ ಅವರ ಸಮಾರಂಭದಲ್ಲಿ ಪಾಲ್ಗೊಳ್ಳದೆ ಇದ್ದ ಅನಂತಕುಮಾರ ಹೆಗಡೆ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡದೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಿ ಬಿಜೆಪಿ ಹೊಸ ಪ್ರಯೋಗ ನಡೆಸಿತು.ಕಾಂಗ್ರೆಸ್ಸಿನಿಂದಲೂ ಹೊಸ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಮಣೆ ಹಾಕಲಾಯಿತು. ಸಾಮಾಜಿಕ ಜಾಲತಾಣದ ಮೂಲಕ ಅಂಜಲಿ ನಿಂಬಾಳ್ಕರ್ ಅಬ್ಬರದ ಪ್ರಚಾರ ನಡೆಸಿದರೂ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಭಾರಿ ಮತಗಳ ಅಂತರದಿಂದ ಜಯಭೇರಿ ಗಳಿಸಿದರು. ಆ ಮೂಲಕ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ಅವರ ಅಧಿಪತ್ಯ ಕೊನೆಯಾಯಿತು. ಮೂರು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅನಂತಕುಮಾರ ಹೆಗಡೆ 2024ರಲ್ಲಿ ರಾಜಕೀಯವಾಗಿ ತೆರೆಯ ಮರೆಗೆ ಸರಿಯುವಂತಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಐವರು ಶಾಸಕರಿದ್ದರು. ಬಿಜೆಪಿಯ ಮೂವರು ಶಾಸಕರಿದ್ದರು. ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರು. ಆದರೂ ಬಿಜೆಪಿಯ ವಿಶ್ವೇಶ್ವರ ಹೆಗಡೆ ಗೆಲುವಿನ ನಗೆ ಬೀರಿದರು.ಸಂಸದರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯಾದ್ಯಂತ ಚುರುಕಿನಿಂದ ಓಡಾಡುತ್ತಿದ್ದಾರೆ. ಸೀಬರ್ಡ್ ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ, ಶಿರೂರು ದುರಂತ, ಚತುಷ್ಪಥ ಹೆದ್ದಾರಿ... ಹೀಗೆ ವಿವಿಧ ಯೋಜನೆಗಳಿಂದ ಉಂಟಾದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.