ಹಾವೇರಿ: ಜಿಲ್ಲಾ ಬಿಜೆಪಿಯಿಂದ ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಪ್ರೊ. ಮಾ. ನಾಗರಾಜ್ ಅವರಿಗೆ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಅದ್ಧೂರಿ ಅಭಿನಂದನಾ ಸಮಾರಂಭ ನಡೆಯಿತು.

ಶಿಸ್ತಿನ ಸಿಪಾಯಿ ಪ್ರೊ. ಮಾ. ನಾಗರಾಜ್: ಲಿಂಗರಾಜ ಚಪ್ಪರದಳ್ಳಿ ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡ ಲಿಂಗರಾಜ ಚಪ್ಪರದಳ್ಳಿ, ಮಾ. ನಾಗರಾಜ್ ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆ ಮತ್ತು ಶಿಸ್ತಿನ ಹೋರಾಟಗಳನ್ನು ಮಾಡಿಕೊಂಡು ಬಂದವರು. ಸಂಘ ಪರಿವಾರ ಹಾಗೂ ಎಲ್ಲ ಸಮುದಾಯಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸಂಘದ ಗರಡಿಯಲ್ಲಿ ಶಿಸ್ತಿನ ಸಿಪಾಯಿಯಂತೆ ಸೇವೆ ಸಲ್ಲಿಸುತ್ತಾ, ರಾಜ್ಯದಲ್ಲಿ ನಮ್ಮ ಪಕ್ಷದ ಕಾರ್ಯಾಲಯದ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಅದೇ ಭವನದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾ. ನಾಗರಾಜ್, ಜಿಲ್ಲಾ ಬಿಜೆಪಿ ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಇಷ್ಟೊಂದು ಅದ್ಧೂರಿ ಸನ್ಮಾನ ದೊರೆತಿರುವುದು ಅತ್ಯಂತ ಸಂತೋಷ ತಂದಿದೆ. ಈ ಗೌರವ ಮುಖ್ಯವಾಗಿ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ, ರಾಷ್ಟ್ರೀಯ ಅಧ್ಯಕ್ಷರಾದ ನಿತೀನ್ ನಬಿನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಂಘ ಪರಿವಾರದ ಪ್ರಮುಖರಿಗೆ ಸಲ್ಲಬೇಕು ಎಂದರು.

ನಾನು ಸಂಘದ ಮಾರ್ಗದರ್ಶನದಲ್ಲಿ ಬೆಳೆದವನು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ಅವಧಿಯಲ್ಲಿ ನನಗೆ ಕೆಪಿಎಸ್‌ಸಿ ಸದಸ್ಯನಾಗಿ ಜನರ ಸೇವೆ ಮಾಡಲು ಅವಕಾಶ ನೀಡಿದ್ದರು. ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಜಿಲ್ಲಾ ಭವನಗಳ ನಿರ್ಮಾಣ ಹಾಗೂ ಸಂಘಟನಾ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿರುವ ತೃಪ್ತಿ ನನಗಿದೆ ಎಂದರು.

ವಿಶ್ವನಾಯಕ ನರೇಂದ್ರ ಮೋದಿಜಿ ಅವರು ಸತತವಾಗಿ ಚುನಾಯಿತ ಪ್ರತಿನಿಧಿಯಾಗಿ 12 ವರ್ಷಗಳಿಗೂ ಹೆಚ್ಚು ಕಾಲ ನೀಡುತ್ತಿರುವ ಜನಕಲ್ಯಾಣ ಆಡಳಿತ ಹೆಮ್ಮೆ ತರುವಂತದ್ದು. ರೈಲ್ವೆ ಮಾರ್ಗಗಳ ವಿದ್ಯುದೀಕರಣ, ದೇಶದ ಮೂಲೆ ಮೂಲೆಗೆ ರಸ್ತೆ ಸಂಪರ್ಕ, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸೇರಿದಂತೆ ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ, ಬೇಟಿ ಪಡಾವೋ ಬೇಟಿ ಬಚಾವೋ ಮತ್ತು ವಿಶ್ವಕರ್ಮ ಯೋಜನೆಗಳ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು ಎಂದರು.

ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಮಂಜುನಾಥ್ ಓಲೆಕಾರ್, ಶಿವರಾಜ ಸಜ್ಜನರ, ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ್, ಪಾಲಾಕ್ಷಗೌಡ ಪಾಟೀಲ, ನೀಲಪ್ಪ ಚಾವಡಿ, ಸಂತೋಷ್ ಆಲದಕಟ್ಟಿ, ಸಿದ್ದಪ್ಪ ಚಿಕ್ಕಬಿದರಿ, ನಂಜುಂಡೇಶ್ ಕಳ್ಳೇರ, ವಿಜಯಕುಮಾರ್ ಚಿನ್ನಿಕಟ್ಟಿ, ನಿರಂಜನ ಹೇರೂರು, ಜಿಗಂಗಾಧರ ಬಾಣದ, ಕಿರಣ್ ಕೊಳ್ಳಿ, ಮಾರುತಿ ಗೊರವರ, ಬಸವರಾಜ ಕೋಳಿವಾಡ, ಬಸವರಾಜ ಕಳಸೂರ, ಕಲ್ಯಾಣಕುಮಾರ್ ಶೆಟ್ಟರ್, ಲತಾ ಬಡ್ನಿಮಠ, ರೋಹಿಣಿ ಪಾಟೀಲ್, ಮಂಜುಳಾ ಕರಬಸಮ್ಮನವರ ಇತರರು ಇದ್ದರು.