ಹಳಿಯಾಳದಲ್ಲಿ ಗಾಳಿಮಳೆಗೆ ಅಪಾರ ಹಾನಿ

| Published : Jul 29 2024, 12:52 AM IST

ಸಾರಾಂಶ

15 ದಿನಗಳಿಗೂ ಹೆಚ್ಚು ಕಾಲ ಸುರಿದ ಭಾರಿ ಮಳೆ ಎರಡು ದಿನಗಳಿಂದ ಕಡಿಮೆಯಾಗಿದೆ. ಆದರೆ ಜಲಾವೃತವಾಗಿದ್ದ ಮನೆಗಳು ಕುಸಿಯುತ್ತಿವೆ.

ಹಳಿಯಾಳ: ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಗಾಳಿಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿದ್ದು, ಮೆಕ್ಕೆಜೋಳದ ಬೆಳೆಯು ನೆಲಕಚ್ಚಿದೆ.ಈವರೆಗೆ ಸುರಿದ ಮಳೆಗೆ ತಾಲೂಕಿನಲ್ಲಿ 84 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ತಾಲೂಕಾಡಳಿತ ತಿಳಿಸಿದೆ. ಅಂದಾಜು 15 ಹೆಕ್ಟೇರ್ ಕೃಷಿ ಬೆಳೆ ಹಾಗೂ 20 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ. ತರಕಾರಿ ಸೇರಿದಂತೆ ಭತ್ತ, ಹತ್ತಿ, ಮೆಕ್ಕೆಜೋಳ ಹಾಗೂ ಕಬ್ಬಿಗೆ ಹಾನಿಯಾದ ಬಗ್ಗೆ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.ಮರಬಿದ್ದು ಹಾನಿ: ಪಟ್ಟಣದ ದಲಾಯತ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ ಬೃಹತ್ ಮಾವಿನ ಮರ ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ದಲಾಯತ ಗಲ್ಲಿ ಹಾಗೂ ನೆರೆಯ ಓಣಿಯ ವಿದ್ಯುತ್‌ ಕಂಬಗಳು ನೆಲಕ್ಕೊರಗಿದ್ದವು. ತಕ್ಷಣ ಹೆಸ್ಕಾಂ ಇಲಾಖೆಯ ಕಾರ್ಯಪ್ರವೃತ್ತರಾಗಿ ಈ ಭಾಗದಲ್ಲಿ ವಿದ್ಯುತ್‌ ನಿಲುಗಡೆ ಮಾಡಿ ಯಾವುದೇ ಅನಾಹುತವಾಗದಂತೆ ಮುನ್ನೆಚರಿಕೆ ವಹಿಸಿದರು. ಶನಿವಾರ ಅರಣ್ಯ ಇಲಾಖೆಯವರು ಬಂದು ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಕಡಿಮೆಯಾದ ಮಳೆಯಬ್ಬರ

ಕಾರವಾರ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ವಿಪರೀತ ಮಳೆ, ಬಿರುಗಾಳಿಯ ಪರಿಣಾಮಗಳು ಉಂಟಾಗುತ್ತಲೆ ಇವೆ. ಭೂಕುಸಿತ, ಮನೆ ಕುಸಿತ ಆಗುತ್ತಿದೆ. ಜಿಲ್ಲೆ ಸಹಜ ಸ್ಥಿತಿಗೆ ಮರಳಲು ಇನ್ನೂ ಸಮಯ ಬೇಕಾಗಲಿದೆ.15 ದಿನಗಳಿಗೂ ಹೆಚ್ಚು ಕಾಲ ಸುರಿದ ಭಾರಿ ಮಳೆ ಎರಡು ದಿನಗಳಿಂದ ಕಡಿಮೆಯಾಗಿದೆ. ಆದರೆ ಜಲಾವೃತವಾಗಿದ್ದ ಮನೆಗಳು ಕುಸಿಯುತ್ತಿವೆ. ಜಿಲ್ಲೆಯಲ್ಲಿ ಭಾನುವಾರ 2 ಮನೆಗಳಿಗೆ ತೀವ್ರ ಹಾನಿಯಾಗಿದೆ. 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ.ಮಳೆಯಿಂದ ಕುಸಿದ ಮನೆಗಳ ಹಾಗೂ ಗುಡ್ಡ ಕುಸಿದ ಭೀತಿ ಎದುರಿಸುತ್ತಿರುವ ಜನತೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಾರವಾರದ 2 ಕುಮಟಾ ಮತ್ತು ಅಂಕೋಲಾದ ತಲಾ 1 ಸೇರಿದಂತೆ ಒಟ್ಟು 4 ಕಾಳಜಿ ಕೇಂದ್ರಗಳಲ್ಲಿ 205 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.

ಭಾನುವಾರ ಕರಾವಳಿ ತಾಲೂಕುಗಳು ಹಾಗೂ ಘಟ್ಟದ ಮೇಲಿನ ಕೆಲ ತಾಲೂಕುಗಳಲ್ಲಿ ಆಗಾಗ ಸಾಧಾರಣ ಮಳೆಯಾಯಿತು. ಕಾರವಾರದಲ್ಲಿ ಭಾನುವಾರ ಮಳೆಗೂ ರಜಾ ದಿನವಾಗಿತ್ತು.