ಸಾರಾಂಶ
ಪ್ರತಿ ವರ್ಷ ಪಟಾಕಿಗಳ ಬೆಲೆ ಶೇ.೧೫ ರಿಂದ ೨೦ರಷ್ಟು ಏರಿಕೆಯಾಗುತ್ತಲೇ ಇದೆ. ಅದೇ ರೀತಿ ಈ ಬಾರಿಯೂ ಪಟಾಕಿಗಳ ಬೆಲೆಯಲ್ಲಿ ಶೇ.೨೦ರಷ್ಟು ಏರಿಕೆಯಾಗಿದೆ. ಬೆಲೆ ಹೆಚ್ಚಳವಾಗಿದ್ದರೂ ಪಟಾಕಿಗಳನ್ನು ಖರೀದಿ ಭರ್ಜರಿಯಾಗಿಯೇ ನಡೆದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿರುವುದರಿಂದ ವ್ಯಾಪಾರಸ್ಥರು ದಿಲ್‌ಖುಷ್ ಆಗಿದ್ದಾರೆ. ಪ್ರತಿ ವರ್ಷ ಪಟಾಕಿ ಬೆಲೆ ಹೆಚ್ಚಳವಾಗುತ್ತಿದ್ದರೂ ವ್ಯಾಮೋಹ ದೂರವಾಗುತ್ತಿಲ್ಲ. ಪಟಾಕಿಗಳಿಂದ ಪರಿಸರ ಮಾಲಿನ್ಯ ಸೃಷ್ಟಿಯಾಗುತ್ತದೆಂಬ ಸತ್ಯ ಗೊತ್ತಿದ್ದರೂ ಸುಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಪಟಾಕಿ ಮಳಿಗೆಗಳೆದುರು ಖರೀದಿಗೆ ಜನಜಾತ್ರೆಯೇ ನೆರೆದಿದೆ.ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪಟಾಕಿಗಳ ಮಳಿಗೆಗಳನ್ನು ತೆರೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ೨೨ ಮಳಿಗೆಗಳಲ್ಲಿ ಪಟಾಕಿ ಮಾರಾಟವಾಗುತ್ತಿದ್ದರೆ, ಈ ವರ್ಷ ಅವುಗಳ ಸಂಖ್ಯೆ ೨೪ಕ್ಕೆ ಏರಿಕೆಯಾಗಿದೆ. ನೂರಾರು ಮಾದರಿಯ ಪಟಾಕಿಗಳು ಮಳಿಗೆಗಳಲ್ಲಿ ಲಭ್ಯವಿದ್ದು ಮಕ್ಕಳು, ಯುವಕರು ಖರೀದಿಗೆ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ.
ಭರ್ಜರಿ ಲಾಭದ ನಿರೀಕ್ಷೆ:ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಟಾಕಿ ಖರೀದಿಗೆ ಮುಂದಾಗಿರುವುದರಿಂದ ವ್ಯಾಪಾರಸ್ಥರು ಈ ವರ್ಷ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಪ್ರತಿ ಬಾರಿ ಮಕ್ಕಳ ಪಟಾಕಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತಿತ್ತು. ಈ ಬಾರಿ ಮಕ್ಕಳ ಪಟಾಕಿಗಳ ಜೊತೆಗೆ ಇತರೆ ಪಟಾಕಿಗಳಿಗೂ ಭಾರೀ ಡಿಮ್ಯಾಂಡ್ ಕೇಳಿಬರುತ್ತಿದೆ. ಮಕ್ಕಳ ಜೊತೆಗೆ ಯುವಕರೂ ಪಟಾಕಿ ಸಿಡಿಸುವುದಕ್ಕೆ ಮುಂದಾಗಿದ್ದಾರೆ.
ಪಟಾಕಿಗಳ ಆಕರ್ಷಣೆಯಿಂದ ಜನರು ದೂರವಾಗುತ್ತಿದ್ದಾರೆಂಬ ಭಾವನೆ ಇತ್ತೀಚಿನ ಕೆಲವು ವರ್ಷಗಳಿಂದ ಮೂಡಿತ್ತಾದರೂ ಈ ವರ್ಷ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಭರ್ಜರಿಯಾಗೇ ನಡೆದಿದೆ. ಪಟಾಕಿಗಳನ್ನು ಜನರು ಮುಗಿಬಿದ್ದು ಕೊಂಡುಕೊಳ್ಳುತ್ತಿರುವ ದೃಶ್ಯ ನಗರದಲ್ಲಿ ಕಂಡುಬರುತ್ತಿದೆ.ಜೈನರಿಂದಲೂ ಹೆಚ್ಚು ಖರೀದಿ:
ದೀಪಾವಳಿಯಿಂದಲೇ ಜೈನರಿಗೆ ಹೊಸ ವರ್ಷ ಆರಂಭವಾಗುತ್ತದೆ. ಹಬ್ಬದಿಂದಲೇ ಹೊಸ ಲೆಕ್ಕ ಆರಂಭಿಸುವುದು ಅವರ ಸಂಪ್ರದಾಯ. ಚಿನ್ನದ ಬೆಲೆ ಗಗನಮುಖಿಯಾದಂತೆಲ್ಲಾ ಹೆಚ್ಚು ಲಾಭ ಗಳಿಸಿರುವ ಖುಷಿಯಲ್ಲಿರುವ ಜೈನರು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಪಟಾಕಿಗಳನ್ನು ಹೆಚ್ಚು ಖರೀದಿಸುವುದರೊಂದಿಗೆ ಸಮುದಾಯದವರ ಜೊತೆಗೂಡಿ ಕುಟುಂಬ ಸಮೇತರಾಗಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಫ್ಯಾನ್ಸಿ ಪಟಾಕಿಗಳಿಗೂ ಭರ್ಜರಿ ಬೇಡಿಕೆ ಇದ್ದು ಅವು ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸುವಂತಹವಾಗಿವೆ. ಸಾಮಾನ್ಯವಾಗಿ ಇಂತಹ ಫ್ಯಾನ್ಸಿ ಪಟಾಕಿಗಳ ಖರೀದಿಗೆ ಜೈನ ಸಮುದಾಯದವರು ಹೆಚ್ಚು ಆಸಕ್ತಿ ತೋರುತ್ತಿದ್ದುದು ಕಂಡುಬಂದಿತು.ನವೀನ ಮಾದರಿಯ ಪಟಾಕಿಗಳ ಆಕರ್ಷಣೆ:
ನವೀನ ಮಾದರಿಯ ಹೊಸ ವಿನ್ಯಾಸದ ಹಲವಾರು ಪಟಾಕಿಗಳು ಜನರ ಗಮನಸೆಳೆಯುತ್ತಿವೆ. ಕತ್ತಿ, ಡ್ರೋನ್, ಹೆಲಿಕಾಪ್ಟರ್, ನವಿಲು ಪಟಾಕಿ ಸೇರಿದಂತೆ ಹಲವಾರು ಪಟಾಕಿಗಳು ಸೇರಿವೆ. ಬಾಹುಬಲಿ ಸಿನಿಮಾದ ಕತ್ತಿಯಂತಹ ಪಟಾಕಿ ಹಚ್ಚಿದರೆ ೧೫ ಮೀಟರ್ ಎತ್ತರಕ್ಕೆ ವೇಗವಾಗಿ ಚಿಮ್ಮುವಂತೆ ವಿನ್ಯಾಸಗೊಳಿಸಿದೆ. ಡ್ರೋನ್ ಮತ್ತು ಹೆಲಿಕಾಪ್ಟರ್ ಪಟಾಕಿಗಳನ್ನೂ ಅತ್ಯಾಕರ್ಷಕವಾಗಿ ಮೂಡುವಂತೆ ಮಾಡಲಾಗಿದೆ. ಮಕ್ಕಳಿಗಾಗಿ ೧೫ ಮಾದರಿಯ ಹೊಸ ವಿನ್ಯಾಸದ ಪಟಾಕಿಗಳನ್ನು ತಯಾರಿಸಲಾಗಿದೆ. ಮಕ್ಕಳನ್ನು ಸೆಳೆಯುವುದಕ್ಕಾಗಿ ಪಟಾಕಿ ಮತ್ತು ಪಟಾಕಿ ಬಾಕ್ಸ್‌ಗಳ ಮೇಲೆ ಪಾವ್ ಪಟ್ರೋಲ್, ಮೋಟು-ಪಟ್ಲು ಸೇರಿದಂತೆ ಕಾರ್ಟೂನ್ ಮಾದರಿಯ ಹಲವಾರು ಪಟಾಕಿಗಳು ಮಾರುಕಟ್ಟೆಗೆ ಬಂದಿರುವುದರಿಂದ ಅವುಗಳಿಗೂ ಬೇಡಿಕೆ ಹೆಚ್ಚಿದೆ.ಮಳೆ ಬಿಡುವು:
ಸಾಮಾನ್ಯವಾಗಿ ದೀಪಾವಳಿ ಹಬ್ಬದ ಸಮಯಕ್ಕೆ ಜಿಟಿ ಮಳೆ ಎದುರಾಗುತ್ತಿತ್ತು. ಆದರೆ, ಈ ವರ್ಷ ಮಳೆಯ ಭೀತಿ ಇಲ್ಲದಿರುವುದು ಮಾರಾಟಗಾರರಿಗೆ ಮತ್ತು ಜನರಿಗೂ ಪಟಾಕಿ ಸಿಡಿಸುವುದಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ. ಈ ಕಾರಣದಿಂದಲೂ ಪಟಾಕಿಗೆ ಬೇಡಿಕೆ ಹೆಚ್ಚಿದೆ. ದೊಡ್ಡವರಿಗೆ ಪಟಾಕಿಯ ಬಗ್ಗೆ ಕ್ರೇಜ್ ಇಲ್ಲದಿದ್ದರೂ ಮಕ್ಕಳ ಬಲವಂತಕ್ಕೆ ಪಟಾಕಿಯನ್ನು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಮೂರು ದಿನ ಹಬ್ಬವಿರುವ ಕಾರಣ ಮಕ್ಕಳಿಗೆ ೫೦೦ ರು.ನ ಎರಡು ಬಾಕ್ಸ್‌ಗಳನ್ನು ತೆಗೆದುಕೊಡುತ್ತಿದ್ದರು. ಯುವಕರೂ ಪಟಾಕಿಗಳ ಆಕರ್ಷಣೆಗಳ ಒಳಗಾಗಿ ಹೆಚ್ಚು ಪಟಾಕಿಗಳ ಖರೀದಿಗೆ ಮುಂದಾಗಿದ್ದರು.ಪಟಾಕಿಗಳ ಬೆಲೆಯಲ್ಲಿ ಶೇ.೨೦ರಷ್ಟು ಹೆಚ್ಚಳ:
ಪ್ರತಿ ವರ್ಷ ಪಟಾಕಿಗಳ ಬೆಲೆ ಶೇ.೧೫ ರಿಂದ ೨೦ರಷ್ಟು ಏರಿಕೆಯಾಗುತ್ತಲೇ ಇದೆ. ಅದೇ ರೀತಿ ಈ ಬಾರಿಯೂ ಪಟಾಕಿಗಳ ಬೆಲೆಯಲ್ಲಿ ಶೇ.೨೦ರಷ್ಟು ಏರಿಕೆಯಾಗಿದೆ. ಬೆಲೆ ಹೆಚ್ಚಳವಾಗಿದ್ದರೂ ಪಟಾಕಿಗಳನ್ನು ಖರೀದಿ ಭರ್ಜರಿಯಾಗಿಯೇ ನಡೆದಿದೆ. ಕನಿಷ್ಠ ೩೦೦ ರು. ನಿಂದ ೪೦೦೦ ರು.ವರೆಗೆ ಬಾಕ್ಸ್ ಪಟಾಕಿಗಳು ಮಾರಾಟವಾಗುತ್ತಿವೆ. ಆಗಸದಲ್ಲಿ ಸಿಡಿಯುವಂತಹ ವೈವಿಧ್ಯಮಯ ಬಣ್ಣ ಬಣ್ಣದ ಚಿತ್ತಾರದ ಪಟಾಕಿಗಳು ೧೦೦೦ ರು.ನಿಂದ ೫ ಸಾವಿರ ರು.ವರೆಗೂ ಮಾರಾಟವಾಗುತ್ತಿದ್ದವು. ಬಿಡಿ ಪಟಾಕಿಗಳನ್ನು ಕೊಳ್ಳುವವರ ಸಂಖ್ಯೆ ವಿರಳವಾಗಿತ್ತು. ಬೆಲೆ ಹೆಚ್ಚೆಂಬ ಕಾರಣಕ್ಕೆ ಬಿಡಿ ಪಟಾಕಿಗಳಿಗಿಂತ ಬಾಕ್ಸ್ ಪಟಾಕಿಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೊರೆ ಹೋಗಿದ್ದರು.