ನವೆಂಬರ್, ಡಿಸೆಂಬರ್‌ನಲ್ಲಿ ಗದ್ದೆಗಳಲ್ಲಿ ಸಾಂಬ್ರೊಳ್ಳಿ ಅಗೆಯುವ ಕಾರ್ಯ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ ₹60ರಿಂದ ₹110ರ ತನಕ ಬೆಲೆ ಸಿಗುತ್ತಿದೆ. ಈ ಬೆಳೆಗೆ ಕೂರ್ಖಾ ಎಂಬ ಹೆಸರೂ ಇದೆ.

ರಾಂ ಅಜೆಕಾರು ಕಾರ್ಕಳ

ತುಳುನಾಡಿನ ಪಾರಂಪರಿಕ ಗೆಡ್ಡೆಬೆಳೆ ಸಾಂಬ್ರಾಣಿಗೆ (ಚೈನೀಸ್‌ ಪೊಟೇಟೋ) ಈ ಬಾರಿ, ಭಾರಿ ಬೇಡಿಕೆ ಉಂಟಾಗಿದೆ. ನವೆಂಬರ್, ಡಿಸೆಂಬರ್‌ನಲ್ಲಿ ಗದ್ದೆಗಳಲ್ಲಿ ಸಾಂಬ್ರೊಳ್ಳಿ ಅಗೆಯುವ ಕಾರ್ಯ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ ₹60ರಿಂದ ₹110ರ ತನಕ ಬೆಲೆ ಸಿಗುತ್ತಿದೆ. ಈ ಬೆಳೆಗೆ ಕೂರ್ಖಾ ಎಂಬ ಹೆಸರೂ ಇದೆ.

ಮಳೆಗಾಲದ ಸಮಯದಲ್ಲಿ ನೆಟ್ಟು, ಹಟ್ಟಿ ಗೊಬ್ಬರದ ಸಹಾಯದಿಂದ ಬೆಳೆಯುವ ಈ ಬೆಳೆ ಮುಖ್ಯವಾಗಿ ಕಾರ್ಕಳ, ಹೆಬ್ರಿ, ಉಡುಪಿ, ಹಿರಿಯಡ್ಕ ಮತ್ತು ದ.ಕ. ಜಿಲ್ಲೆಯ ಕೆಲ ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ. ಬಟಾಟೆಯಂತೆಯೇ ಭೂಮಿಯೊಳಗೆ ಬೆಳೆಯುವ ಈ ಗೆಡ್ಡೆ, ತುಳುನಾಡಿನ ಪಾರಂಪರಿಕ ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವೆಂದು ಕೃಷಿಕರು ಹೇಳುತ್ತಾರೆ. ಸಾಂಬ್ರಾಣಿ ಬೆಳೆಯುವ ಸಮಯದಲ್ಲಿ ಕೃಷಿಕರು ಎದುರಿಸುವ ಒಂದು ದೊಡ್ಡ ತೊಂದರೆ ಎಂದರೆ ಹೆಗ್ಗಣ, ಹಾವುಗಳ ಕಾಟ. ಈ ಹೆಗ್ಗಣಗಳು ಸಾಂಬ್ರಾಣಿಯನ್ನು ಬಹಳ ಇಷ್ಟಪಡುತ್ತವೆ. ಗದ್ದೆಗಳಲ್ಲಿ ಹೊಂಡ ಅಗೆದು ಗೆಡ್ಡೆಗಳನ್ನು ತಿನ್ನುವುದರಿಂದ ಸಾಕಷ್ಟು ನಷ್ಟ ಉಂಟಾಗುತ್ತದೆ. ಈ ಸಮಯದಲ್ಲಿ ಹೆಬ್ಬಾವುಗಳೂ ಹೆಚ್ಚಾಗಿ ಕಾಣಸಿಗುತ್ತವೆ, ಏಕೆಂದರೆ ಅವು ಹೆಗ್ಗಣಗಳ ಬೇಟೆಗಾರರು.

ಕಳೆದ ನಾಲ್ಕು ದಶಕಗಳಿಂದ ಕೆರುವಾಶೆಯ ಶಿರ್ಲಾಲು, ಪೆರ್ಡೂರು, ಕೊಕ್ಕರ್ಣೆ, ಕುಕ್ಕಿಕಟ್ಟೆ, ಪೇತ್ರಿ ಸೇರಿದಂತೆ ಹಲವೆಡೆಗಳಲ್ಲಿ ಸಾಂಬ್ರಾಣಿ ಬೆಳೆಯುವುದು ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ, ನಿರಂತರ ಮಳೆ ಮತ್ತು ಕೃಷಿಕರು ಅಡಕೆ ಹಾಗೂ ತೋಟಗಾರಿಕೆ ಕಡೆಗೆ ಮುಖಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಬೆಳೆ ಕುಸಿತ ಕಂಡಿದೆ.

ಹಳೆಯ ಪೀಳಿಗೆಯ ರೈತರು ಈ ಬೆಳೆ ಬೆಳೆಸುವಲ್ಲಿ ಆಸಕ್ತಿ ತೋರಿದರೂ, ಹೊಸ ಪೀಳಿಗೆಯವರು ಅದಕ್ಕೆ ಅಗತ್ಯವಾದ ಶ್ರಮ, ಸಮಯ ಮತ್ತು ಮಾರುಕಟ್ಟೆ ಅನಿಶ್ಚಿತತೆ ಕಾರಣದಿಂದ ದೂರವಾಗುತ್ತಿದ್ದಾರೆ. ಪರಿಣಾಮವಾಗಿ ಉತ್ಪಾದನೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಕೂಡ ಏರಿಕೆಯಾಗಿದೆ.ಸಾಂಬ್ರಾಣಿ ಬೆಳೆ ತುಳುನಾಡಿನ ಪಾರಂಪರಿಕ ಕೃಷಿಯ ಒಂದು ಗುರುತು. ಅದರ ಸಂರಕ್ಷಣೆ ಮತ್ತು ಪ್ರೋತ್ಸಾಹ ಇಲ್ಲದಿದ್ದರೆ, ಈ ಪಾರಂಪರಿಕ ಗೆಡ್ಡೆ ಮುಂದಿನ ಪೀಳಿಗೆಗೆ ಕೇವಲ ನೆನಪಾಗುವ ಸಾಧ್ಯತೆ ಇದೆ.

ಬೇಡಿಕೆಯಿದ್ದರೂ ಹೆಚ್ಚಿನ ಬೆಳೆ ಬೆಳೆದಿಲ್ಲ. ಇದರಿಂದಾಗಿ ಬೆಲೆಯೂ ಏರಿಕೆಯಾಗಿದೆ.

-ಶಶಿಧರ್ ಶಿರ್ಲಾಲು, ಸಾಂಬ್ರಾಣಿ ಬೆಳೆಗಾರು