ಬಬಲೇಶ್ವರ ಪಟ್ಟಣದಲ್ಲಿ ಡಿ.29ರಂದು ಬೃಹತ್ ಬಸವಾದಿ ಶರಣರ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಿರೋಳದ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಬಲೇಶ್ವರ ಪಟ್ಟಣದಲ್ಲಿ ಡಿ.29ರಂದು ಬೃಹತ್ ಬಸವಾದಿ ಶರಣರ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಿರೋಳದ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮ ಉಳಿಯಬೇಕು. ಹಿಂದೂ ಸಂಸ್ಕೃತಿಯ ಆಚಾರ, ವಿಚಾರಗಳು ಪುನರುತ್ಥಾನ ಹೊಂದಬೇಕು. ಈ ನಿಟ್ಟಿನಲ್ಲಿ ಬಸವಾದಿ ಶರಣರ ಹಿಂದೂ ವೇದಿಕೆ ವತಿಯಿಂದ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಸಮಾವೇಶದ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ ವಿಜಯಪುರ ನಗರದ ದರಬಾರ್ ಹೈಸ್ಕೂಲ್ ಮೈದಾನದಿಂದ ಬಬಲೇಶ್ವರದವರೆಗೂ ಬೈಕ್ ಜಾಥಾ ತೆರಳಲಿದೆ. ನಂತರದಲ್ಲಿ ಸಂಜೆ 4.30ಕ್ಕೆ ಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ನಾಡಿನಾದ್ಯಂತ ಇರುವ ಪೂಜ್ಯರು, ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಅಲ್ಲದೇ, ಸಾವಿರಾರು ಸಂಖ್ಯೆಯ ಭಕ್ತಾದಿಗಳನ್ನು ಸಮಾವೇಶಕ್ಕೆ ಆಹ್ವಾನಿಸಲಾಗುತ್ತಿದೆ ಎಂದು ಹೇಳಿದರು.ಈ ಸಮಾವೇಶದ ಉದ್ದೇಶವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಇಷ್ಟು ದಿನ ಸನಾತನ ಹಾಗೂ ಹಿಂದೂ ಧರ್ಮದ ಸಮಾವೇಶಗಳು ಮಾತ್ರ ನಡೆಯುತ್ತಿದ್ದವು. ವಿಜಯಪುರ-ಬಾಗಲಕೋಟೆ ಜಿಲ್ಲೆಯು ಶರಣರ ನಾಡು ಆಗಿದೆ. ಇಲ್ಲಿ ಸಮಾವೇಶ ಆಯೋಜಿಸಿರುವುದರಿಂದ ಬಸವಾದಿ ಶರಣರ ಹಿಂದೂ ಸಮಾವೇಶ ಎಂಬ ವಿಶೇಷವಾದ ಹೊಸ ಹೆಸರು ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಣ್ಣಿಕೇರಿಯ ವಿಜಯಸಿದ್ದೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಬುದ್ನಿಯ ಸಿದ್ದಾನಂದ ಸ್ವಾಮೀಜಿ ಉಪಸ್ಥಿತರಿದ್ದರು.