ಸಾರಾಂಶ
ಮಂಗಳೂರು: ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ದ.ಕ. ಜಿಲ್ಲೆ ಇದರ ವತಿಯಿಂದ ‘ಧರ್ಮತೇಜೋ ಬಲಂ ಬಲಂ’ ಎಂಬ ಶಿರೋನಾಮೆಯಲ್ಲಿ ಬೃಹತ್ ಜನಾಗ್ರಹ ಸಮಾವೇಶ ಆ.22 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ, ಯತಿಶ್ರೇಷ್ಠರುಗಳ ಹಾಗೂ ಇನ್ನಿತರ ಧಾರ್ಮಿಕ ಮುಖಂಡರ ಸಹಿತವಾಗಿ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅಪಮಾನಿಸಲಾಗುತ್ತಿದೆ. ಈ ರೀತಿ ವಿಜೃಂಭಿಸುತ್ತಿರುವ ದುಷ್ಟಕೂಟಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಪ್ರಸ್ತುತ ವಿದ್ಯಮಾನಗಳ ವಿರುದ್ಧ ಹಾಗೂ ಮಂಗಳೂರು ಸೇರಿದಂತೆ ಸಾರ್ವಜನಿಕ ವಲಯದ ಜನತೆಯಲ್ಲಿ ಆತ್ಮವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ಸಮಾಜ ಪ್ರಮುಖರು, ಜನಪ್ರತಿನಿಧಿಗಳು, ಧಾರ್ಮಿಕ ನಾಯಕರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಸಮುದಾಯಗಳ ಪ್ರಮುಖರು, ಜನನಾಯಕರು, ಧರ್ಮಾಭಿಮಾನಿಗಳೆಲ್ಲರ ಒಟ್ಟುಗೂಡುವಿಕೆಯಲ್ಲಿ ನಡೆಯಲಿದೆ.ಬೆಳಗ್ಗೆ ೯ ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಮುಂಭಾಗದಲ್ಲಿ ಧರ್ಮಜಾಗೃತಿ ಜನಾಗ್ರಹ ಸಮಾವೇಶವು ‘ಓಂ ನಮಃ ಶಿವಾಯ’ ಎನ್ನುವ ಪಂಚಾಕ್ಷರಿ ಮಂತ್ರ ಪಠಣ, ಭಕ್ತಿಗೀತೆ, ಭಜನೆ ಕಾರ್ಯಕ್ರಮದ ಮೂಲಕ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ ೧೦ ಗಂಟೆಗೆ ಶರವು ರಾಘವೇಂದ್ರ ಶಾಸ್ತ್ರಿ ಹಾಗೂ ಕಟೀಲು ಆಸ್ರಣ್ಣ ಸಹೋದರರ ಉಪಸ್ಥಿತಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರಕ್ಕೆ ಹಿರಿಯರಾದ ನಿಟ್ಟೆ ವಿನಯ ಹೆಗ್ಡೆಯವರು ಪುಷ್ಪಾರ್ಚನೆ ಮಾಡುವುದರೊಂದಿಗೆ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಲಿರುವರು.ಪ್ರಮುಖರಾದ ಡಾ. ಮೋಹನ ಆಳ್ವ, ಎಂ.ಬಿ.ಪುರಾಣಿಕ್, ಹರಿಕೃಷ್ಣ ಪುನರೂರು, ಎಸ್. ಪ್ರದೀಪ ಕುಮಾರ ಕಲ್ಕೂರ ಮತ್ತಿತರರು ಹಾಗೂ ಧಾರ್ಮಿಕ ಮುಖಂಡರ ಮಾರ್ಗದರ್ಶನದಲ್ಲಿ ಸಮಾವೇಶ ನಡೆಯಲಿರುವುದು. ಮಧ್ಯಾಹ್ನ ೧೨ ಗಂಟೆಗೆ ಶಾಂತಿ ಮಂತ್ರದೊಂದಿಗೆ ಸಮಾವೇಶ ಸಂಪನ್ನಗೊಳ್ಳಲಿರುವುದು. ಬಳಿಕ ಸರ್ಕಾರಕ್ಕೆ ಠರಾವನ್ನು ಸಲ್ಲಿಸಲಾಗುವುದು.
ನಮ್ಮ ಧರ್ಮ, ನಮ್ಮ ಅಸ್ಥಿತ್ವಕ್ಕಾಗಿ ನಾವೆಲ್ಲರೂ ಅಪಾರ ಸಂಖ್ಯೆಯಲ್ಲಿ ಒಂದಾಗೋಣ ಎಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.