ಸಾರಾಂಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ದೇಗುಲದ ಪಾವಿತ್ರ್ಯದ ವಿರುದ್ಧ ನಡೆದಿರುವ ಷಡ್ಯಂತ್ರದ ತನಿಖೆಯನ್ನು ಎನ್.ಐ.ಎ ಗೆ ವಹಿಸಬೇಕು, ಷಡ್ಯಂತ್ರ ನಡೆಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರ ವಿರೋಧಿಸಿ, ಪಟ್ಟಣದಲ್ಲಿ ಸೋಮವಾರ ವಿವಿಧ ಹಿಂದೂ ಪರ ಸಂಘಟನೆಗಳಿಂದ ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯ ಮತ್ತು ಪ್ರಗತಿ ವಿರುದ್ಧ ನಡೆದ ಷಡ್ಯಂತ್ರದ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೆ ನಾವು ಅದರ ಪ್ರಾಯಶ್ಚಿತ ಪಡುವ ದಿನಗಳು ದೂರವೇನಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮವನ್ನು, ಹಿಂದೂ ಧರ್ಮದ ದೇವಾಲಯಗಳ ಪಾವಿತ್ರ್ಯತೆಯನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಹಿಂದೂಗಳಾದ ನಾವು ಜಾತಿ, ಮತ, ಪಕ್ಷ ಬಿಟ್ಟು ಗಟ್ಟಿಯಾದ ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನಾವು ಇಲ್ಲಿ ಯಾವುದರ ವಿರುದ್ಧವೂ ಧ್ವನಿ ಎತ್ತಲಾಗದ ಪರಿಸ್ಥಿತಿಗೆ ಬಂದು ಬಿಡುತ್ತೇವೆಂದರು.ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಪಕ್ಷಾತೀತ, ಧರ್ಮಾತೀತವಾಗಿ ಆಡಳಿತ ನಡೆಸುತ್ತಿಲ್ಲ. ಒಂದು ಕೋಮಿನವರನ್ನು ತೃಪ್ತಿಪಡಿಸುವ ಕೆಲಸಕ್ಕೆ ಇಳಿದಿದೆ. ಇದರಿಂದಾಗಿ ರಾಜ್ಯದಲ್ಲಿ ಜಾತಿ- ಜಾತಿ ಮತ್ತು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ, ಬೆಂಕಿ ಇಡುವ ಕೆಲಸ ಕೆಲವರಿಂದ ಆಗುತ್ತಿದೆ ಎಂದು ದೂರಿದರು.
ನಮ್ಮ ಧರ್ಮಕ್ಕೆ ಅನ್ಯಾಯವಾದಾಗ, ನಮ್ಮ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆಗೆ ಧಕ್ಕೆ ತಂದಾಗ ಪ್ರಶ್ನಿಸದೇ ಇದ್ದರೆ ನಾವು ಹಿಂದೂಗಳಾಗಿ ಹುಟ್ಟಿ ಏನು ಪ್ರಯೋಜನ. ಹಿಂದೂ ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ನಮ್ಮ ಧರ್ಮ ಉಳಿಸುತ್ತದೆ, ಇಲ್ಲವಾದಲ್ಲಿ ಇಲ್ಲ ಎಂದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕ ಎಂ.ರಾಜಣ್ಣ, ಡಾ.ಸತ್ಯನಾರಾಯಣರಾವ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಯುವ ಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಹಿತ್ತಲಹಳ್ಳಿ ಗೋಪಾಲಗೌಡ ಇನ್ನಿತರರು ಮಾತನಾಡಿದರು.
ಪ್ರತಿಭಟನೆ ಬೆಂಬಲಿಸಿ ಹಿಂದೂಪರ ರೈತ ಸಂಘ, ಒಕ್ಕಲಿಗರ ಸಂಘ, ಧರ್ಮಸ್ಥಳ ಸಂಘ, ಆಟೋ ಚಾಲಕರ ಸಂಘ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀರಾಮ ಸೇನೆ, ಬಜರಂಗ ದಳ ಸೇರಿ ಅನೇಕ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿ ಭಾಗವಹಿಸಿದ್ದರು.ತಹಸೀಲ್ದಾರ್ ಗಗನ ಸಿಂಧು ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸೀಕಲ್ ಆನಂದಗೌಡ, ಸುರೇಂದ್ರಗೌಡ, ಕನಕಪ್ರಸಾದ್, ಹಿತ್ತಲಹಳ್ಳಿ ಸುರೇಶ್, ರಮೇಶ್ ಬಾಯರಿ, ಪಲಿಚೆರ್ಲು ಸೋಮಶೇಖರ್ , ಆನೆಮಡಗು ಮುರಳಿ, ಇನ್ನಿತರೆ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.