ವೀರಲೋಕ ಪುಸ್ತಕ ಸಂತೆಗೆ ಭರ್ಜರಿ ಸ್ಪಂದನೆ

| Published : Feb 11 2024, 01:47 AM IST

ಸಾರಾಂಶ

ಬೆಂಗಳೂರಿನ ಎಚ್ಎಸ್‌ಆರ್‌ ಲೇಔಟ್‌ನಲ್ಲಿ ವೀಕರಪುತ್ರ ಶ್ರೀನಿವಾಸ್‌ ಆಯೋಜಿಸಿರುವ ವೀರ ಲೋಕ ಪುಸ್ತಕ ಹಬ್ಬವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೂವತ್ತಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು, ಮಕ್ಕಳು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ಸಾಹಿತ್ಯ, ಶೈಕ್ಷಣಿಕ, ಪ್ರವಾಸ, ಸ್ಪರ್ಧಾತ್ಮಕ ಹೀಗೆ ವಿವಿಧ ಬಗೆಯ ಸಹಸ್ರಾರು ಶೀರ್ಷಿಕೆಗಳ ಪುಸ್ತಕಗಳು ಒಂದೇ ಸೂರಿನಡಿಯಲ್ಲಿ ಪ್ರದರ್ಶನಗೊಂಡಿದ್ದವು.

ವೀರಲೋಕ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನ ಸ್ವಾಭಿಮಾನಿ ಉದ್ಯಾನದಲ್ಲಿ ಶನಿವಾರ ಆಯೋಜಿಸಿರುವ ಪುಸ್ತಕ ಸಂತೆಯಲ್ಲಿ ಕಂಡುಬಂದ ದೃಶ್ಯಗಳಿವು. ಖ್ಯಾತ ಪ್ರಕಾಶಕರು, ಲೇಖಕರು, ಬರಹಗಾರರು ಸಂತೆಯಲ್ಲಿ ಪಾಲ್ಗೊಂಡಿದ್ದರು. ಪುಸ್ತಕ ಪ್ರೇಮಿಗಳು ತಮಗಿಷ್ಟವಾದ ಲೇಖಕರ ಪುಸ್ತಕಗಳನ್ನು ಹುಡುಕಾಡಿ ಖರೀದಿಸುವಲ್ಲಿ ನಿರತರಾಗಿದ್ದರು. ಇನ್ನು ಹಲವರು ಒಂದೇ ಸೂರಿನಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಪುಸ್ತಕಗಳನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪುಸ್ತಕ ಸಂತೆಗೆ ಚಾಲನೆ ನೀಡಿ, ಖುದ್ದಾಗಿ ಏಳು ಪುಸ್ತಕಗಳನ್ನು ಖರೀದಿಸಿ ಗಮನ ಸೆಳೆದರು. ಪುಸ್ತಕ ಸಂತೆಯಲ್ಲಿ ಒಟ್ಟು 100ಕ್ಕೂ ಹೆಚ್ಚು ಪುಸ್ತಕಗಳ ಮಳಿಗೆಗಳನ್ನು ಹಾಕಲಾಗಿದೆ. ಈ ಮಳಿಗೆಗಳಲ್ಲಿ 55 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದ್ದವು. ಶೇ.5ರಿಂದ 20ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳ ಬೆಲೆ ನಿಗದಿ ಮಾಡಲಾಗಿದ್ದು, ಪುಸ್ತಕ ಪ್ರೇಮಿಗಳಿಗೆ ಫುಡ್‍ಸ್ಟಾಲ್ ಸೇರಿದಂತೆ ಮನರಂಜನೆಯೂ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

ಪುಸ್ತಕ ಸಂತೆ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ದೇಶ ಸುತ್ತು ಕೋಶ ಓದು’ ಎಂದು ನಾಣ್ಣುಡಿ ಇದೆ. ಜ್ಞಾನದ ಬೆಳವಣಿಗೆ ಆಗಬೇಕಾದರೆ ಪುಸ್ತಕ ಓದಲೇಬೇಕು. ಅನೇಕ ವಿಷಯಗಳ ಮೇಲೆ ಲೇಖಕರು ಪುಸ್ತಕಗಳನ್ನು ಬರೆದಿದ್ದಾರೆ. ಜ್ಞಾನ ವಿಕಸನಕ್ಕೆ ಪುಸ್ತಕ ಬೇಕು. ದುಡ್ಡು ಕೊಟ್ಟು ಪುಸ್ತಕಗಳನ್ನು ಖರೀದಿಸಿ ಓದಬೇಕು. ಇನ್ನೊಬ್ಬರು ತೆಗೆದುಕೊಂಡ ಪುಸ್ತಕದಿಂದ ಓದಬಾರದು. ಪುಸ್ತಕಗಳನ್ನು ಪತ್ರಿಕೆ ತರಹ ಓದಬಾರದು’ ಎಂದರು.

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಸರ್ಕಾರವು ಗ್ರಂಥಾಲಯ ಇಲಾಖೆ ಮೂಲಕ ಪುಸ್ತಕಗಳ ಸಗಟು ಖರೀದಿ ಮಾಡುತ್ತಾ ಬಂದಿದೆ. ಅದು ಆಯಾ ವರ್ಷವೇ ಖರೀದಿ ಆಗಬೇಕು. ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ಸೇರಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಹಿಂದೆ ಸಿದ್ದರಾಮಯ್ಯ ಅವರೇ ಬಜೆಟ್‍ನಲ್ಲಿ ₹10 ಕೋಟಿ ಹಣ ಮೀಸಲಿಟ್ಟಿದ್ದರು. ಈಗ ₹20 ಕೋಟಿ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ಪುಸ್ತಕ ಸಂತೆಯ ಆಯೋಜಕ ವೀರಕಪುತ್ರ ಶ್ರೀನಿವಾಸ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಭಾಗವಹಿಸಿದ್ದರು.

--

ಪುಸ್ತಕ ಖರೀದಿಸಿದ ಸಿಎಂ

ಪುಸ್ತಕ ಸಂತೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಒಂದು ಸಾವಿರ ರು.ಗಳನ್ನು ಕೊಟ್ಟು ಏಳು ಪುಸ್ತಕಗಳನ್ನು ಖರೀದಿಸಿದರು. ಇದೇ ವೇಳೆ ‘ದುಡ್ಡು ಕೊಟ್ಟು ಪುಸ್ತಕ ಖರೀದಿಸಬೇಕಪ್ಪ’ ಎಂದು ಉಗ್ರಪ್ಪ ಅವರಿಗೆ ಕಿವಿಮಾತು ಹೇಳಿದರು. `ವಕೀಲೆ ಮತ್ತು ಧರ್ಮವೃತ್ತಿ’, ‘ಕರ್ನಾಟಕ ರಾಣಿಯರ ಆಡಳಿತ ನೀತಿ’, ‘ಮೂಲಭೂತ ಹಕ್ಕುಗಳು’, ‘ಸಂಸದೀಯ ಇತಿಹಾಸ’, ‘1897ರ ಸಾಮಾನ್ಯ ಖಂಡಗಳ ಅಧಿನಿಯಮ’, ‘ಪ್ರಜಾಪ್ರಭುತ್ವ ಮತ್ತು ಚುನಾವಣೆ ಪದ್ಧತಿ’ ಸೇರಿದಂತೆ ಏಳು ಪುಸ್ತಕಗಳನ್ನು ಖರೀದಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಲವು ಮಕ್ಕಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.